ಮಂಗಳೂರು (ದಕ್ಷಿಣ ಕನ್ನಡ): ಬಿಜೆಪಿ ಮುಖಂಡನ ಪುತ್ರನೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಬಳಿಕ ನಾಪತ್ತೆಯಾಗಿರುವ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದು, ಸಂತ್ರಸ್ತೆಯ ತಾಯಿ ಇದೀಗ ಮಾಧ್ಯಮಗಳ ಮುಂದೆ ಮಗಳಿಗೆ ನ್ಯಾಯ ಕೊಡಿಸುವಂತೆ ಕೋರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂತ್ರಸ್ತೆಯ ತಾಯಿ, ʼನನ್ನ ಮಗಳು ಮತ್ತು ಆರೋಪಿ ಕೃಷ್ಣ.ಜೆ.ರಾವ್ ಪ್ರೌಢಶಾಲೆಯಲ್ಲಿರುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು. ಮುಂದುವರಿದು ದೈಹಿಕ ಸಂಪರ್ಕದ ವರೆಗೂ ಸಾಗಿದೆ. ಆದರೆ ಮಗಳು ಗರ್ಭಿಣಿಯಾಗಿ ಏಳು ತಿಂಗಳ ಬಳಿಕ ನಮಗೆ ವಿಚಾರ ತಿಳಿದಿದೆ. ಈ ವೇಳೆ ನಾನು ಆತನ ತಂದೆ ಪಿ.ಜಿ.ಜಗನ್ನಿವಾಸ್ ರಾವ್ ಅವರ ಬಳಿ ಪ್ರಶ್ನಿಸಿದ್ದೆ. ಅವರು ಅವತ್ತೇ ಇಬ್ಬರನ್ನೂ ಮದುವೆ ಮಾಡುವ ಭರವಸೆಯನ್ನು ನೀಡಿದ್ದರು ಎಂದು ತಿಳಿಸಿದರು.
ಆ ಬಳಿಕ ನನಗೆ ಕಾಲ್ ಮಾಡಿದ ಆರೋಪಿ ಕೃಷ್ಣ.ಜೆ.ರಾವ್ ʼಮಗಳನ್ನು ಮದುವೆಯಾಗೋದಿಲ್ಲ. ನೀವು ಮದುವೆಯಾಗಲು ಒತ್ತಾಯ ಮಾಡಿದರೆ ನಾನು ಆತ್ಮಹತ್ಯೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ. ಈ ಹಿನ್ನೆಲೆ ನಾವು ಆತನ ವಿರುದ್ಧ ದೂರು ನೀಡಲು ಪುತ್ತೂರು ಮಹಿಳಾ ಠಾಣೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಆರೋಪಿಯ ತಂದೆ ಪಿ.ಜಿ.ಜಗನ್ನಿವಾಸ್ ಕೂಡಾ ಠಾಣೆಗೆ ಬಂದಿದ್ದರು. ಆರೋಪಿಯ ತಂದೆ ಠಾಣೆಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮೊಬೈಲ್ ನಲ್ಲಿ ಕರೆ ಮಾಡಿ ಮಾತನಾಡಿದ ಬಳಿಕ ನನ್ನ ಕೈಗೆ ಮೊಬೈಲ್ ನೀಡಿದ್ದರು. ನನ್ನ ಬಳಿ ಮಾತನಾಡಿದ ಶಾಸಕರು. ಅವರು ಮದುವೆ ಮಾಡಿಸಲು ಒಪ್ಪಿದ್ದಾರೆ. ಹುಡುಗನ ಭವಿಷ್ಯದ ಪ್ರಶ್ನೆ ಇರುವ ಕಾರಣ ಪೊಲೀಸ್ ದೂರು ನೀಡಬೇಡಿ ಎಂದು ಹೇಳಿದರು. ಇಬ್ಬರನ್ನೂ ಮದುವೆ ಮಾಡಿಸಿ ಕೊಡುವುದಕ್ಕೆ ಪ್ರಯತ್ನಿಸುವುದಾಗಿಯೂ ಹೇಳಿದ್ದರು. ಅಲ್ಲದೆ ಮದುವೆ ಮಾಡಿಕೊಡುವುದಾಗಿ ಠಾಣೆಯಲ್ಲಿ ಆರೋಪಿಯ ತಂದೆ ಜಗನ್ನಿವಾಸ್ ರಾವ್ ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದಾರೆ ಎಂದು ಹೇಳಿದರು.