ಪಿರಿಯಾಪಟ್ಟಣ: ತಾಲೂಕಿನ ಪುಷ್ಪಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಪೂಜೀತಾ 625 ಕ್ಕೆ 623 ಅಂಕಗಳನ್ನು ಪಡೆದು ಶಾಲೆಗೆ ಮತ್ತು ತಾಲ್ಲೂಕಿಗೆ ಕೀರ್ತಿ ತಂದಿದ್ದಾಳೆ. ವಿದ್ಯಾರ್ಥಿನಿ ಪೂಜಿತಾ ಹುಣಸವಾಡಿ ಸರ್ಕಾರಿ ಶಾಲೆಯ ಶಿಕ್ಷಕ ಸಿ.ಸಿ.ಜಗದೀಶ್ ಮತ್ತು ಜ್ಯೋತಿ ಹೆಚ್.ಎಂ. ದಂಪತಿಗಳ ಪುತ್ರಿಯಾಗಿದ್ದು ಉತ್ತಮ ಅಂಕ ಗಳಿಸುವ ಮೂಲಕ ವಿದ್ಯಾಭ್ಯಾಸ ಮಾಡಿದ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾಳೆ.
ವಿದ್ಯಾರ್ಥಿಯ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಶಾಲೆಗೆ ಭೇಟಿ ನೀಡಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಯನ್ನು ಅಭಿನಂದಿಸಿ ಸನ್ಮಾನಿಸಿ ಪೋಷಕರ ಹಾರೈಕೆ ಹಾಗೂ ಶಾಲೆಯ ಶಿಕ್ಷಕರ ನಿರಂತರ ಶ್ರಮದ ಫಲವಾಗಿ ಇಂದು ಪಿರಿಯಾಪಟ್ಟಣ ತಾಲೂಕಿಗೆ ಮೂರನೇ ರಾಂಕ್ ಬರಲು ಸಾಧ್ಯವಾಗಿದು. ತಾಲೂಕಿನಲ್ಲಿ 20 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದು ಅದೇ ರೀತಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಹ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗೆ ಇನ್ನೂ ಹೆಚ್ಚಿನ ಯಶಸ್ವಿ ಸಿಗಲಿ ಹಾಗೂ ವಿದ್ಯಾರ್ಥಿನಿ ಬಯಸಿದಂತಹ ಉನ್ನತ ವಿದ್ಯಾಭ್ಯಾಸ ಪಡೆಯಲಿ ಎಂದು ಆಶೀರ್ವದಿಸಿದರು.
ಐಎಎಸ್ ಮಾಡುವ ಗುರಿ:
ಮಗಳು ಪೂಜೀತಾಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ ಪೋಷಕರಾದ ಶಿಕ್ಷಕ ಸಿ.ಸಿ.ಜಗದೀಶ್ ರವರು ಎಸ್ಎಲ್ಸಿ ಫಲಿತಾಂಶ ನೋಡಿ ಸಂಭ್ರಮದಲ್ಲಿದ್ದಾರೆ. ರಾಜ್ಯಕ್ಕೆ ಮೂರನೇ ಸ್ಥಾನ ಬಂದ ಖುಷಿಯಲ್ಲೇ ಪ್ರತಿಕ್ರಿಯಿಸಿರುವ ಪೂಜೀತಾ “ನನಗಿಂತ ನನ್ನ ಟೀಚರ್ಸ್ ಹಾಗೂ ತಂದೆ-ತಾಯಿಗೆ ಹೆಚ್ಚಿನ ಸಂತೋಷವಾಗಿದೆ. ಮುಂದೆ ಪಿಯುಸಿಯಲ್ಲಿ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡಿ ಐಎಎಸ್ ಅಧಿಕಾರಿ ಆಗಬೇಕೆನ್ನುವ ಕನಸಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪುಷ್ಪ ಶಾಲೆಯ ಪ್ರಾಂಶುಪಾಲ ಫಿಲಿಪ್, ಶಿಕ್ಷಣ ಸಂಯೋಜಕ ಸಿ. ಕೆ. ಗಣೇಶ್, ಬಿ ಆರ್ ಪಿ ಮನೋಹರ್ ಸೇರಿದಂತೆ ಶಾಲಾ ಆಡಳಿತ ಮಂಡಳಿ ಮತ್ತು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.