ಬ್ರೆಸಿಲಿಯಾ: ಬ್ರೆಜಿಲ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್’ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯನ್ನು ಬ್ರೆಜಿಲ್‌ನ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಬ್ರೆಸಿಲಿಯಾದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರಧಾನಿಗೆ ನೀಡಿ ಗೌರವಿಸಿದರು.
ಭಾರತ-ಬ್ರೆಜಿಲ್ ಸಂಬಂಧಗಳನ್ನು ಬಲಪಡಿಸಲು ಮತ್ತು ಜಿ-20, ಬ್ರಿಕ್ಸ್, ಯುಎನ್‌ನಂತಹ ಅಂತಾರಾಷ್ಟ್ರೀಯ ವೇದಿಗಳಲ್ಲಿ ಪ್ರಧಾನಿಯವರ ಪಾತ್ರವನ್ನು ಮೆಚ್ಚಿ ಈ ಗೌರವ ನೀಡಲಾಗಿದೆ. 2014ರ ಮೇನಲ್ಲಿ ಪ್ರಧಾನಿಯಾದ ಬಳಿಕ ಮೋದಿಗೆ ದೊರಕಿದ 26ನೇ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ.
ಗೌರವ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ, “ಇದು 140 ಕೋಟಿ ಭಾರತೀಯರಿಗೂ ಹೆಮ್ಮೆ ತಂದ ಘಳಿಗೆಯಾಗಿದೆ. ಬ್ರೆಜಿಲ್ ಸರ್ಕಾರ ಹಾಗೂ ಜನತೆಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು.