ಘಾಜಿಯಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊವೊಂದರಲ್ಲಿ, ಸ್ಲಂ ಪ್ರದೇಶದ ನಿವಾಸಿಗಳನ್ನು ಪೊಲೀಸ್ ಅಧಿಕಾರಿಯೊಬ್ಬರು ಬೆದರಿಸುವಂತೆ ಕಾಣಿಸಿಕೊಂಡ ದೃಶ್ಯ ವೈರಲ್ ಆದ ಹಿನ್ನೆಲೆಯಲ್ಲಿ ಘಾಜಿಯಾಬಾದ್ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.
ಸ್ಲಂ ನಿವಾಸಿಗಳ ಬಳಿ, ಅಕ್ರಮ ವಲಸಿಗರೇ ಅಲ್ಲವೇ ಎಂಬುದನ್ನು ಪತ್ತೆಹಚ್ಚುವ ಸಾಧನವೊಂದು ತಮ್ಮ ಬಳಿ ಇದೆ ಎಂದು ಅಧಿಕಾರಿ ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪೊಲೀಸರು ಇದನ್ನು ಸಾಮಾನ್ಯ ಪ್ರದೇಶ ನಿಯಂತ್ರಣ ಕಾರ್ಯಾಚರಣೆ ಎಂದು ವಿವರಣೆ ನೀಡಿದರೂ, ಈ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿರುವ ವಿಡಿಯೊದಲ್ಲಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವ್ಯಕ್ತಿಯ ಬೆನ್ನಿನ ಮೇಲೆ ಸ್ಮಾರ್ಟ್‌ಫೋನ್‌ನಂತೆ ಕಾಣುವ ಸಾಧನವೊಂದನ್ನು ಇಟ್ಟು, ಆ ವ್ಯಕ್ತಿಯು ಬಾಂಗ್ಲಾದೇಶದಿಂದ ಬಂದವನು ಎಂದು ಹೇಳುತ್ತಿರುವುದು ಕಾಣಿಸುತ್ತದೆ. ವ್ಯಕ್ತಿ ಹಾಗೂ ಆತನ ಪಕ್ಕದಲ್ಲಿ ನಿಂತಿದ್ದ ಮಹಿಳೆಯ ಬಳಿ ಸುಳ್ಳು ಹೇಳಬೇಡಿ, ನಮ್ಮಲ್ಲಿ ಸುಳ್ಳನ್ನು ಪತ್ತೆ ಮಾಡುವ ಯಂತ್ರವಿದೆ ಎಂದು ಹೇಳಿದ್ದಾರೆ.
ಈ ವೇಳೆ ಆಕೆಯ ಪಕ್ಕದಲ್ಲಿ ನಿಂತಿದ್ದ ಮಹಿಳೆ ಮತ್ತು ಅಪ್ರಾಪ್ತ ಬಾಲಕಿ ತಾವು ಬಿಹಾರದವರು ಎಂದು ಹೇಳುತ್ತಾ ಮೊಬೈಲ್ ಫೋನ್‌ನಲ್ಲಿ ದಾಖಲೆಗಳನ್ನು ತೋರಿಸಿದ್ದಾರೆ. ಆದರೆ, ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಇದಕ್ಕೆ ಒಪ್ಪಿದ್ದಂತೆ ಕಂಡುಬಂದಿಲ್ಲ.
ಡಿಸೆಂಬರ್ 23 ರಂದು ಬಿಹಾರಿ ಮಾರುಕಟ್ಟೆ ಪ್ರದೇಶದ ಕೊಳೆಗೇರಿ ಪ್ರದೇಶದಲ್ಲಿ ಕೌಶಂಬಿ ಪೊಲೀಸ್ ಠಾಣೆ ಅಧಿಕಾರಿಗಳು, ಕ್ಷಿಪ್ರ ಕಾರ್ಯ ಪಡೆ (RAF) ಸಿಬ್ಬಂದಿಯೊಂದಿಗೆ ನಡೆಸಿದ ಕಾರ್ಯಾಚರಣೆಯ ಸಮಯದಲ್ಲಿ ಈ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಡಿಸಿಪಿ ನಿಮಿಷ್ ಪಾಟೀಲ್ ದೃಢಪಡಿಸಿದ್ದಾರೆ.



