ಸುಳ್ಯ: ವಿಶ್ವದಲ್ಲಿ ಪೋಲಿಯೋ ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶ. ಆದ್ದರಿಂದ ಪೋಲಿಯೋ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ತನಕ ರೋಟರಿಯ ಪ್ರಯತ್ನ ಮುಂದುವರಿಯಲಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.ಹೇಳಿಕೆ ನೀಡಿದ್ದಾರೆ.
ಸುಳ್ಯ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.೨೧ರಂದು ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದ್ದು, ಭಾರತ ೨೦೧೩ರಲ್ಲಿ ಮುಕ್ತ ಆಗಿದೆ. ಆದರೆ ಜಗತ್ತಿನಲ್ಲಿ ಒಟ್ಟು ೩೯ ಪೋಲಿಯೋ ಕೇಸುಗಳು ಇದೆ. ಪಾಕಿಸ್ತಾನದಲ್ಲಿ ೩೦ ಹಾಗೂ ಅಪಘಾನಿಸ್ತಾನದಲ್ಲಿ ೯ ಪೋಲಿಯೋ ಕೇಸುಗಳು ಇದೆ ಎಂದು ತಿಳಿಸಿದರು. ಹಾಗೂ ಈ ಪೋಲಿಯೋ ಪಿಡುಗು ಮತ್ತೆ ಹರಡದಂತೆ ಲಸಿಕೆ ಹಾಕಿಸಿ ಎಚ್ಚರಿಕೆ ವಹಿಸುವ ಅಗತ್ಯ ಇದೆ ಎಂದು ಹೇಳಿದರು.
ಇನ್ನೂ ಸಮಾಜದ ಅಭಿವೃದ್ಧಿಗೆ ರೋಟರಿ ಫೌಂಡೇಶನ್ ವತಿಯಿಂದ ಹಲವಾರು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದೆ. ಪ್ರತಿ ಕ್ಲಬ್ ಕೂಡ ಹಲವು ಸಾಮಾಜಿಕ ಸೇವೆಗಳನ್ನು ನಡೆಸುತ್ತಿದೆ ಮತ್ತು ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ ೪ ಕೋಟಿಯ ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು. ರೋಟರಿ ಕ್ಲಬ್ ಸುಳ್ಯ ಸಿಟಿಗೆ ಸುಳ್ಯ ಸರಕಾರಿ ಆಸ್ಪತ್ರೆಯ ಕಣ್ಣಿನ ಚಿಕಿತ್ಸಾ ವಿಭಾಗದಲ್ಲಿ ಶಸ್ತ್ರಚಿಕಿತ್ಸಾ ವಿಭಾಗಕ್ಮೆ ಮೈಕ್ರೋ ಸ್ಕೋಪ್ ನೀಡುವ ಯೋಜನೆ ಇದೆ. ಸಮಾಜದ ಬೇಡಿಕೆಗೆ ಅನುಸಾರವಾಗಿ ವಿವಿಧ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತಿದ್ದೇವೆ ಎಂದಿದ್ದಾರೆ.
ಈ ವೇಳೆ ಸುಳ್ಯ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗವರ್ನರ್ ಮಿತ್ತಡ್ಕದ ರೋಟರಿ ಶಾಲಾ ಕ್ಯಾಂಪಸ್‌ನಲ್ಲಿ ನಿರ್ಮಿಸಿದ ಟ್ರಸ್ಟ್ ರೂಮ್, ಶೌಚಾಲಯಗಳ ಉದ್ಘಾಟನೆ ನೆರವೇರಿಸಿದರು. ಸುದ್ದಿಗೋಷ್ಠಿಯಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ್ ಮೋಹನ್, ಕಾರ್ಯದರ್ಶಿ ಭಾಸ್ಕರನ್ ನಾಯರ್, ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಪ್ರಮೋದ್.ಕೆ, ಝೋನಲ್ ಲೆಪ್ಟಿನೆಂಟ್ ಪುರುಷೋತ್ತಮ ಕೆ.ಜಿ ಉಪಸ್ಥಿತರಿದ್ದರು.



