ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದುಬಿದ್ದು, ಮಗು ಸೇರಿ 7 ಮಂದಿ ಸಾವನ್ನಪ್ಪಿದ್ದು, ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಿವೆ.
ಈ ಸಂಬಂಧ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ ಕಾಂಪೌಂಡ್ ಗೋಡೆ ಕುಸಿದು ಮಗು ಸೇರಿದಂತೆ ಏಳು ಮಂದಿ ಪ್ರಾಣ ಕಳೆದುಕೊಂಡ ದುರ್ಘಟನೆ ತೀವ್ರ ಆಘಾತ ಉಂಟುಮಾಡಿದೆ. ಈ ದುರ್ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜಧಾನಿಯ ಮಧ್ಯಭಾಗದಲ್ಲೇ ಇಂತಹ ದುರಂತ ಸಂಭವಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರದ ನಿರ್ಲಕ್ಷ್ಯ ಮತ್ತು ಮೂಲಸೌಕರ್ಯಗಳ ದುರವಸ್ಥೆಗೆ ಸ್ಪಷ್ಟ ಉದಾಹರಣೆ. ಜನರ ಜೀವ ರಕ್ಷಣೆ ಮಾಡಬೇಕಾದ ಕಾಂಗ್ರೆಸ್ ಸರ್ಕಾರ ಸಿಎಂ ಕುರ್ಚಿ ಕಲಹ ಹಾಗೂ ಹಣ ಲೂಟಿಯಲ್ಲೇ ಮಗ್ನವಾಗಿ ಜನರ ಪ್ರಾಣ ಕಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ವೈಫಲ್ಯಗಳ ಬಗ್ಗೆ, ಅಧಿಕಾರಿಗಳ ಒಳ ಕಚ್ಚಾಟದ ಬಗ್ಗೆ ಈ ಹಿಂದೆ ಸದನದಲ್ಲೇ ನಾನು ಪ್ರಸ್ತಾಪಿಸಿದ್ದರೂ ಅದಕ್ಕೆ ಬೆಲೆ ಕೊಡದ ಸರ್ಕಾರದಿಂದಾಗಿ ಇಂದು ಅಮಾಯಕ ಜೀವಗಳು ಬಲಿಯಾಗಿವೆ. ಮೃತರ ಕುಟುಂಬಗಳಿಗೆ ನ್ಯಾಯಸಮ್ಮತ ಪರಿಹಾರ ನೀಡಬೇಕು. ಕೇವಲ ಪರಿಹಾರ ಘೋಷಣೆಗೆ ಸೀಮಿತವಾಗದೆ, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು. ಹಳೆ ಕಟ್ಟಡಗಳು ಮತ್ತು ಶಿಥಿಲ ಗೋಡೆಗಳ ತಾಂತ್ರಿಕ ಪರಿಶೀಲನೆ ರಾಜ್ಯದಾದ್ಯಂತ ತುರ್ತಾಗಿ ನಡೆಸಬೇಕು. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಎಂಟು ಮಂದಿ ದುರ್ಮರಣಕ್ಕೀಡಾದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಪೌಂಡ್ ಗೋಡೆಯ ಪಕ್ಕದಲ್ಲೇ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಮತ್ತು ಮಳೆಯಿಂದ ತಪ್ಪಿಸಿಕೊಳ್ಳಲು ಆಶ್ರಯ ಪಡೆದಿದ್ದವರ ಮೇಲೆ ಸೂಕ್ತ ನಿರ್ವಹಣೆ ಇಲ್ಲದ ಹಳೆಯ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದದ್ದೇ ಈ ದುರ್ಘಟನೆಗೆ ಕಾರಣವೆಂದು ಹೇಳಲಾಗುತ್ತಿರುವುದು ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜಧಾನಿ ಬೆಂಗಳೂರಿನಲ್ಲೇ ಈ ಪಾಡಾದರೆ ಉಳಿದ ಕಡೆ ಗತಿ ಏನು? ಎಂದು ಪ್ರಶ್ನಿಸಿದ್ದಾರೆ. ಈ ಭೀಕರ ದುರ್ಘಟನೆಗೆ ಹೊಣೆ ಹೊತ್ತು ರಾಜ್ಯ ಸರ್ಕಾರ ಗಾಯಗೊಂಡವರಿಗೆ ಚಿಕಿತ್ಸೆ, ಮೃತ ಕುಟುಂಬದವರಿಗೆ ಸಾಂತ್ವನ ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ.
ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು, ಮಳೆಗೆ ಇನ್ನೊಂದು ಅವಘಡ ಸಂಭವಿಸದಂತೆ ಶಿಥಿಲ ನಿರ್ಮಾಣಗಳ ದುರಸ್ತಿ ಸೇರಿದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ದುರ್ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಚಿರಶಾಂತಿ ಪ್ರಾರ್ಥಿಸುತ್ತಾ, ಪುಟ್ಟ ಮಕ್ಕಳ ಕುಟುಂಬ ಸದಸ್ಯರು ಸೇರಿದಂತೆ ಮೃತಪಟ್ಟವರ ಎಲ್ಲ ಕುಟುಂಬದವರಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆಂದು ತಿಳಿಸಿದ್ದಾರೆ.



