Wednesday, March 4, 2026
Google search engine

Homeರಾಜ್ಯಮಂಗಳೂರು ಅಭಿವೃದ್ಧಿಯಲ್ಲಿ ರಾಜಕೀಯ ನಡೆಯುತ್ತಿದೆ : ಶಾಸಕ ವೇದವ್ಯಾಸ್ ಕಾಮತ್ ಆರೋಪ

ಮಂಗಳೂರು ಅಭಿವೃದ್ಧಿಯಲ್ಲಿ ರಾಜಕೀಯ ನಡೆಯುತ್ತಿದೆ : ಶಾಸಕ ವೇದವ್ಯಾಸ್ ಕಾಮತ್ ಆರೋಪ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡು ಕಾಮಗಾರಿಗೆ ಬಿಜೆಪಿ ಆಡಳಿತದಲ್ಲಿ ಅನುದಾನ ನೀಡಿದ್ದು, ಅದನ್ನು ಕಾಂಗ್ರೆಸ್ ಅವಧಿಯಲ್ಲಿ ಮಂಜೂರುಗೊಳಿಸಲಾಗಿದೆ ಎಂದು ಜನತೆಯ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.

ನಗರದ ಅಟಲ್ ಸೇವಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ ಬಿಜೆಪಿ ಆಡಳಿತ ಅವಧಿಯಲ್ಲಿ ನಗರದ ಕೊಡಿಯಾಲ್‌ಗುತ್ತು ವೆಟ್‌ವೆಲ್‌ನಿಂದ ಕುದ್ರೋಳಿ ವೆಟ್‌ವೆಲ್ ಸಂಪರ್ಕಿಸುವ ಪಂಪಿಂಗ್ ಕೊಳವೆಯನ್ನು ಕೊಡಿಯಾಲ್‌ಗುತ್ತಿನಿಂದ ಹಾಲ್‌ಮಾರ್ಕ್ ಅಪಾರ್ಟ್‌ಮಂಟ್‌ವರೆಗೆ ಬದಲಾಯಿಸಲು ೩.೪೨ ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಇದನ್ನು ಈಗ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಾನೇ ಮಂಜೂರುಗೊಳಿಸಿದ್ದು ಎಂದು ತಪ್ಪು ಮಾಹಿತಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳ ಪರಿಶೀಲನೆ ಕರೆಸುತ್ತಿದ್ದಾರೆ. ಕಾಮಗಾರಿಗೆ ಅನುಮೋದನೆ ಲಭಿಸಿದ ಬಳಿಕ ಪರಿಶೀಲಿಸುವ ವಿಚಾರ ಏನಿದೆ ಎಂದು ಪ್ರಶ್ನಿಸಿದರು.

ಮುಂದುವರೆದು, ಪಾಲಿಕೆ ವ್ಯಾಪ್ತಿಯ ಎಂ.ಜಿ.ರಸ್ತೆಯ ಬಲ್ಲಾಳ್‌ಬಾಗ್ ಸೇತುವೆ ಅಭಿವೃದ್ಧಿಗೆ ೨ ಕೋಟಿ ರೂ. ಮೀಸಲಿರಿಸಿದ್ದೆ. ಇದು ಕೂಡ ಪಾಲಿಕೆ ಬಿಜೆಪಿ ಆಡಳಿತದ ಅವಧಿಯಲ್ಲೇ ಮಂಜೂರುಗೊಂಡಿದ್ದು, ಇಲ್ಲಿ ಸೇತುವೆಯ ಅಗತ್ಯ ಇಲ್ಲ ಎಂದು ಉಸ್ತುವಾರಿ ಸಚಿವರು ದಿಢೀರ್ ತೀರ್ಮಾನಿಸಿ ಆ ಮೊತ್ತವನ್ನು ಪಡೀಲಿನ ಡಿಸಿ ಕಚೇರಿ ಸಂಕೀರ್ಣ ಪೂರ್ಣಗೊಳಿಸಲು ವರ್ಗಾಯಿಸಿದ್ದಾರೆ ಎಂದು ವೇದವ್ಯಾಸ್ ಕಾಮತ್ ಆರೋಪಿಸಿದರು.

ಇನ್ನೂ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಶಾಸಕರನ್ನು ಕರೆಸಿ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಲು ಸಮಯವಿಲ್ಲ. ಆದರೆ ಕಾಂಗ್ರೆಸ್‌ನ ರಾಜಕೀಯ ಕಾರ್ಯಕ್ರಮ ಇದ್ದರೆ ಬಿಡುವು ಮಾಡಿಕೊಂಡು ಬರುತ್ತಾರೆ. ಹಾಗಾಗಿ ಇಲ್ಲಿಗೆ ಅವರು ಗೆಸ್ಟ್ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ವ್ಯಂಗ್ಯವಾಡಿದರಲ್ಲದೆ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಇಲ್ಲದಿದ್ದರೂ ನನ್ನ ಪ್ರಯತ್ನದಿಂದ ಅನುದಾನ ಬಿಡುಗಡೆಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಬಾಕಿಯಾಗಿದ್ದ ಅನುದಾನ ಬಿಡುಗಡೆಗೊಳಿಸಿದ್ದರು. ಹಿಂದಿನ ಬಿಜೆಪಿ ಸರಕಾರ ಅನುಮೋದಿಸಿದ ಕಾಮಗಾರಿ ಹೊರತುಪಡಿಸಿದರೆ ಕಾಂಗ್ರೆಸ್ ಸರಕಾರ ಯಾವುದೇ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ್ ಪಾಂಡೇಶ್ವರ, ಮಾಜಿ ಉಪಮೇಯರ್ ಶಕೀಲಾ ಕಾವ, ಬಿಜೆಪಿ ಮುಖಂಡರಾದ ಮನೋಹರ್ ಕದ್ರಿ, ಮೋಹನ ಪೂಜಾರಿ, ಅಶ್ವಿತ್ ಕೊಟ್ಟಾರಿ, ಪ್ರವೀಣ್ ನಿಡ್ಡೋಡಿ, ಲಲ್ಲೇಶ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular