ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಸ್ಪಷ್ಟನೆ; ಯಾವುದೇ ತನಿಖೆಗೆ ನಾನು ಸಿದ್ಧ — ಎಸ್‌ಐಟಿ, ಸಿಬಿಐಗೆ ನೀಡಲಿ, ಅಕ್ಷೇಪವಿಲ್ಲ
ಮಂಗಳೂರು (ದಕ್ಷಿಣ ಕನ್ನಡ): ಹಿಂದೂ ಮುಖಂಡನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಪತ್ತೆ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳೂರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಕೆಟ್ಟ ವಿಚಾರಗಳು ವೈರಲ್ ಆಗ್ತಿದೆ. ಇದ್ರಲ್ಲಿ ಹಿಂದೂ ಮುಖಂಡ ಮಿತ್ ಧರೆಗುಡ್ಡೆ ನನ್ನ ಅಪ್ತ ಎಂಬಂತೆ ವೈರಲ್ ಆಗ್ತಿದೆ. ರಾಜಕಾರಣಿ ಮಾತ್ರವಲ್ಲ, ಒಟ್ಟು 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಪತ್ತೆಗೆ ಸಂಬಂಧಿಸಿದಂತೆ ಮೂಡಬಿದ್ರೆ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಕ್ಷೇತ್ರದ ಜನಪ್ರತಿನಿಧಿ ಹೇಳಿಕೊಂಡು ಜನರು ನನ್ನ ಬಳಿ ಕೆಲಸ ಕಾರ್ಯಗಳಿಗೆ ಬರುತ್ತಾರೆ. ನಾನು 7 ವರ್ಷಗಳಿಂದ ನನ್ನ ಕಾರಿನಲ್ಲಿ ಯಾರನ್ನು ಕರ್ಕೊಂಡು ಹೋಗಿಲ್ಲ. ಅಶ್ಲೀಲ ವಿಡಿಯೋ ಬಗ್ಗೆ ತನಿಖೆಯಾಗಲಿ, ನನ್ನ ಸಂಪೂರ್ಣ ಒಪ್ಪಿಗೆ ಇದೆ. ಎಸ್ ಐಟಿ, ಸಿಬಿಐ, ಎನ್ ಎಐ ಗೆ ಕೊಡಲಿ ನನ್ನದೇನು ಅಕ್ಷೇಪವಿಲ್ಲ. ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದ ಅವರು ಸರಕಾರ ಯಾವುದೇ ತನಿಖೆಗೆ ಕೊಡಲಿ ನನ್ನ ಸಂಪೂರ್ಣ ಬೆಂಬಲವಿದೆ. ನನ್ನ ತೇಜೋವಧೆ ಮಾಡುವ ಪ್ರಯತ್ನ ಆಗ್ತಿದೆ ಎಂದ ಬಿಜೆಪಿ ಶಾಸಕ ಕಿಡಿಕಾರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ಧರೆಗುಡ್ಡೆ ಎಂಬುವವರ ಮೊಬೈಲ್ ನಲ್ಲಿ ಕರಾವಳಿಯ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಪತ್ತೆಯಾಗಿತ್ತು.