ನವದೆಹಲಿ: ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸುಪ್ರೀಂ ಕೋರ್ಟ್ ನಲ್ಲೂ ಭಾರಿ ಹಿನ್ನಡೆ ಪಡೆದಿದ್ದು, ಈ ವಿಚಾರದ ಬೆನ್ನೆಲ್ಲೇ ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಬೇರೆ ಕೋರ್ಟ್ ಗೆ ವರ್ಗಾಯಿಸಲು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.
ಈ ಬಗ್ಗೆ ತಮ್ಮ ವಿರುದ್ಧ ಬಾಕಿ ಇರುವ ಇನ್ನೂ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು 81ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಿಂದ ಬೇರೆ ಕೋರ್ಟ್ ಗೆ ವರ್ಗಾಯಿಸಬೇಕೆಂದು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಜ್ವಲ್ ರೇವಣ್ಣ ಅರ್ಜಿಯನ್ನು ಸುಪ್ರೀಂಕೋರ್ಟ್ ನ ಸಿಜೆಐ ಪೀಠ ತಿರಸ್ಕರಿಸಿದ್ದು, ಸಿಜೆಐ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ, ಕೆಳ ನ್ಯಾಯಾಲಯದ ಜಡ್ಜ್ ಅವರ ಅಭಿಪ್ರಾಯಗಳು, ಪೂರ್ವಾಗ್ರಹಪೀಡಿತರಾಗಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದು ತಿಳಿಸಿದೆ ಎನ್ನಲಾಗಿದೆ.
ಪ್ರಸ್ತುತ ಕೇಸ್ ನಲ್ಲಿ ಹಾಜರುಪಡಿಸುವ ಸಾಕ್ಷ್ಯಗಳ ಆಧಾರದ ಮೇಲೆ ಜಡ್ಜ್ ತೀರ್ಪು ನೀಡಬೇಕೇ ವಿನಃ ಹಿಂದಿನ ಕೇಸ್ ತೀರ್ಪು ಆಧಾರದ ಮೇಲೆ ಅಲ್ಲ ಎಂದು ಹೇಳಿ, ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ನಾವು ಜಿಲ್ಲಾ ನ್ಯಾಯಾಂಗದ ನೈತಿಕತೆಯನ್ನು ಸಹ ನೋಡಬೇಕು. ಈ ವ್ಯಕ್ತಿ ಸುಪ್ರೀಂಕೋರ್ಟ್ ಗೆ ಹೋಗಿ ಜಿಲ್ಲಾ ಕೋರ್ಟ್ ವಿರುದ್ಧ ಆದೇಶ ಪಡೆದಿದ್ದಾರೆ ಎಂಬ ಸಂದೇಶ ಕಳಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಸಿಜೆ ಹೇಳಿದ್ದಾರೆ ಹಾಗೂ ಜಿಲ್ಲಾ ನ್ಯಾಯಾಂಗದ ನೈತಿಕತೆಯನ್ನು ನಾವು ಉನ್ನತ ಮಟ್ಟದಲ್ಲಿ ಇಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.



