Tuesday, September 23, 2025
Google search engine

Homeಅಪರಾಧಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಮೈಸೂರಿನ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ತೀರ್ಪು

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಮೈಸೂರಿನ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ತೀರ್ಪು

ಬೆಂಗಳೂರು: ಮೈಸೂರಿನ  ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ನಿನ್ನೆ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂಬುದಾಗಿ ಆದೇಶ ಪ್ರಕಟಿಸಿತ್ತು. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆಯ ತೀರ್ಪು ಪ್ರಕಟಿಸಲಾಗಿದ್ದು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೇ 10 ಲಕ್ಷ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ. ಈ ಮೂಲಕ ಮಹತ್ವದ ತೀರ್ಪು ನೀಡಿದ್ದಾರೆ.

ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶಿಕ್ಷ ಪ್ರಮಾಣದ ಕುರಿತು ವಿಚಾರಣೆ ನಡೆಯಿತು. ಮೊದಲಿಗೆ ಪ್ರಾಸಿಕ್ಯೂಷನ್ ಪರ ವಾದಿಸಲು ಕೋರ್ಟ್ ಸೂಚನೆ ನೀಡಿತು ಪ್ರಾಸಿಕ್ಯೂಷನ್ ಪರವಾಗಿ ಎಸ್ಪಿಪಿ ಬಿ.ಎನ್ ಜಗದೀಶ್ ವಾದ ಆರಂಭ ಮಾಡಿದರು. ಗರಿಷ್ಠ ಶಿಕ್ಷಕನಿಷ್ಠ ಶಿಕ್ಷೆ ಎಷ್ಟು ಎಂದು ಸ್ಪಷ್ಟವಾಗಿದೆ ಕೇವಲ ಅತ್ಯಾಚಾರ ಆಗಿದ್ದರೆ 10 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿತ್ತು. ಆದರೆ ಇಲ್ಲಿ ಪದೇ ಪದೇ ಅತ್ಯಾಚಾರವಾಗಿದೆ ಎಂದರು.

ಕನಿಷ್ಠ 10 ವರ್ಷ ಗರಿಷ್ಠ ಜೀವನ ಪರ್ಯಂತ ಸೆರೆವಾಸದ ಅವಕಾಶ ಇದೆ, ಮಹಿಳೆ ಶಿಕ್ಷಿತಳಲ್ಲ, ಬಡ ಕೂಲಿ ಕೆಲಸದ ಮಹಿಳೆ ಆಕೆಯ ಮೇಲೆ ಅಧಿಕಾರಯುತ ಸ್ಥಿತಿಯಲ್ಲಿ ಅತ್ಯಾಚಾರ ನಡೆಸಿರುವಂತಹ ಅಪರಾಧ ಸಾಬೀತಾಗಿದೆ. ದುರಾದೃಷ್ಟವಶಾತ್ ಆಕೆಗೆ ಯಾವುದೇ ಸ್ಥಾನಮಾನವಿಲ್ಲ ವಿಡಿಯೋ ನೋಡಿದರೆ ಕೃತ್ಯದ ತೀವ್ರತೆ ಸ್ಪಷ್ಟವಾಗಿದೆ 10 ಸಾವಿರ ಸಂಬಳಕ್ಕೆ ಇವರು ಕೆಲಸ ಮಾಡುತ್ತಿದ್ದರು ಎಂದು ಬಿಎನ್ ಜಗದೀಶ್ ವಾದಿಸಿದರು.

ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ.ಹೀಗಾಗಿ ಮಹಿಳೆ ಕೆಲಸ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು.ತನ್ನ ಬಟ್ಟೆಗಳನ್ನು ಬಿಟ್ಟು ಮನೆಗೆ ಓಡುವಂತಾಯಿತು. ಅಪರಾಧಿಯ ಕೈಯಲ್ಲಿ ಆಕೆ ಸುಲಭದ ಬಲಿಯಾಗಿದ್ದಳು ಅತ್ಯಾಚಾರಕ್ಕೆ ದೇಹದ ಮೇಲಲ್ಲ ಮನಸ್ಸಿನ ಮೇಲು ಆಗಿದೆ. ವಿಡಿಯೋ ನೋಡಿದ ಬಳಿಕ ಆಕೆ ಆತ್ಮಹತ್ಯೆಗೆ ನಿರ್ಧರಿಸಿದ್ದಳು ಜೀವಕ್ಕಿಂತ ಹೆಚ್ಚಿನ ಹಾನಿ ಸಂತ್ರಸ್ತ ಮಹಿಳೆಗೆ ಆಗಿದೆ ಎಂದು ಬಿಎನ್ ಜಗದೀಶ್ ವಾದಿಸಿದರು.

ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆಯ ಚಿತ್ರೀಕರಣ ಮಾಡಲಾಗಿದೆ. ಆಕೆಯನ್ನು ಬ್ಲಾಕ್ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರದ ರೀತಿ ಆತನ ವಕ್ರ ಮನಸ್ಥಿತಿ ತೋರಿಸುತ್ತದೆ. ಪ್ರಜ್ವಲ್ ಸಂಸದನಾಗಿದ್ದು ಇಂತಹ ದುಷ್ಕೃತ್ಯ ಎಸಗಿದ್ದಾನೆ. ಕಾನೂನು ತಿಳಿದಿದ್ದರೂ ಕೂಡ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಈತನ ಮೇಲೆ ಈ ರೀತಿಯ ಇನ್ನಷ್ಟು ಕೆಎಸ್ ಗಳಿವೆ. ಬಹಳಷ್ಟು ಜನರ ಅಶ್ಲೀಲ ವಿಡಿಯೋ ಮಾಡಿದ್ದಾನೆ. ವಿಡಿಯೋ ಚಿತ್ರೀಕರಿಸಿದ್ದು ಗಂಭೀರವಾದ ಅಪರಾಧವಾಗಿದೆ. ಪ್ರಜ್ವಲ್ ಗೆ ಗರಿಷ್ಠ ಶಿಕ್ಷೆ ವಿಧಿಸಿ. ಇದು ಇತರರಿಗೂ ಎಚ್ಚರಿಕೆಯಾಗಬೇಕು ಎಂದು ವಾದಿಸಿದರು.

ಜೀವನಪರ್ಯಂತ ಸೆರೆವಾಸ ಶಿಕ್ಷೆ ನೀಡಿ. ನೋಡೋಣ ಕಿಡ್ನ್ಯಾಪ್ ಮಾಡಿ ಆಕೆ ಹೇಳಿಕೆ ಪಡೆದಿದ್ದಾರೆ ಸಾಕ್ಷಾಧಾರ ನಾಶಪಡಿಸಲು ಯತ್ನಿಸಿರುವುದು ಕೂಡ ಗಂಭೀರ ಅಪರಾಧವಾಗಿದೆ ತಪ್ಪಿಗೆ ಪಶ್ಚಾತಾಪ ತೋರಿಲ್ಲ ಈತನಿಗೆ ಕಠಿಣ ಶಿಕ್ಷೆ ನೀಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು. ಹಣ ಅಧಿಕಾರ ಇರುವ ಇವರಿಗೆ ಕಡಿಮೆ ಶಿಕ್ಷೆ ಆಗಬಾರದು.ತನಗಿರುವ ಸ್ಥಾನಮಾನವನ್ನು ಈತ ದುರುಪಯೋಗಪಡಿಸಿಕೊಂಡಿದ್ದಾನೆ. ಹಾಗಾಗಿ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಎಸ್ಪಿಪಿ ಬಿಎನ್ ಜಗದೀಶ್ ಮನವಿ ಮಾಡಿದರು.

ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಜಗದೀಶ್ ಅವರು, ಕಡಿಮೆ ಶಿಕ್ಷ ವಿಧಿಸಿದಾಗ ಸುಪ್ರೀಂ ಕೋರ್ಟ್ ಶಿಕ್ಷೆ ಹೆಚ್ಚಿಸಿದೆ. ಸುಪ್ರೀಂ ಕೋರ್ಟ್ ಶಿಕ್ಷೆ ಹೆಚ್ಚಿಸಿದ ಉದಾಹರಣೆಗಳು ಕೂಡ ಇವೆ. ಅಪರಾಧಿಯ ವಕ್ರ ಮನಸ್ಥಿತಿ ಗಮನದಲ್ಲಿ ಇಡಬೇಕು.ಇಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯೇ ವಿಧಿಸಬೇಕು ಎಂದು ತಮ್ಮ ವಾದವನ್ನು ಅಂತ್ಯಗೊಳಿಸಿದರು.

.ಇನ್ನು ಪ್ರಾಜಿಕ್ಯೂಷನ್ ಪರ ವಕೀಲ ಅಶೋಕ್ ನಾಯಕ್ ವಾದ ಆರಂಭಿಸಿ ಸಂಸದರೆ ಇಂತಹ ಕೃತ್ಯ ಮಾಡಿದಾಗ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದರು. ರಾಜಕಾರಣಿಯಾಗಿ ಕಿರಿಯ ವಯಸ್ಸಿನಲ್ಲಿ ಸಂಸದನಾಗಿದ್ದ. ಜನ ಆಯ್ಕೆ ಮಾಡಿದ್ದು ಏಕೆ? ಜನರಿಂದ ಅರಿಸಲ್ಪಟ್ಟ ಈತ ಮಾಡಿದ್ದೇನು? ಹಾಗಾಗಿ ಈತನಿಗೆ ವಿಧಿಸುವ ಶಿಕ್ಷೆ ಸಮಾಜಕ್ಕೆ ಸಂದೇಶವಾಗಬೇಕು. ಪ್ರಜ್ವಲ್ ಬಡವನಲ್ಲ ಕರೋಡ್ ಪತಿಯಾಗಿದ್ದಾನೆ. ಹೆಚ್ಚಿನದಂಡ ವಿಧಿಸಿ ಅದರ ದೊಡ್ಡ ಭಾಗ ಸಂತ್ರಸ್ತಮ್ಮೆಗಳಿಗೆ ನೀಡಬೇಕು ವಿಡಿಯೋ ವೈರಲ್ ಆಗಿ ಹಾಗೆ ದುಡಿಯಲು ಎಲ್ಲೂ ಹೋಗದಂತೆ ಆಗಿದೆ. ಸೆಕ್ಷನ್ 357ರ ಅಡಿಯಲ್ಲಿ ದೊಡ್ಡ ಮೊತ್ತದ ದಂಡ ವಿಧಿಸಬೇಕು ಎಂದು ವಾದ ಮುಕ್ತಾಯವಾಯಿತು.

ಇಬ್ಬರು ಸರ್ಕಾರದ ಪರ ವಕೀಲರ ವಾದ ಮುಕ್ತಾಯವಾದ ಬಳಿಕ, ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲೆ ನಳಿನಾ ಮಾಯಾಗೌಡ ವಾದ ಆರಂಭಿಸಿದ್ದು, ಎಸ್‌ಪಿಪಿಗಳು ಸಮಾಜಕ್ಕೆ ಸಂದೇಶ ನೀಡಬೇಕು ಎಂದು ವಾದಿಸಿದ್ದಾರೆ. ಯುವ ಸಂಸದನಾಗಿ ಪ್ರಜ್ವಲ್ ರೇವಣ್ಣ ಜನಸೇವೆ ಮಾಡಿದ್ದಾನೆ. ಹಣ ಮಾಡಲೆಂದು ಆತ ರಾಜಕಾರಣಕ್ಕೆ ಬರಲಿಲ್ಲ. ಪ್ರಜ್ವಲ್ ವಿರುದ್ಧ ರಾಜಕೀಯ ಪ್ರೇರಿತ ಕ್ರಮವಾಗಿದೆ. ಪ್ರಜ್ವಲ್ ರೇವಣ್ಣ ವಯಸ್ಸು ಕೇವಲ 34 ವರ್ಷ ಆರೋಪಿಯ ರಾಜಕೀಯ ಸ್ಥಾನಮಾನ ಶಿಕ್ಷೆಗೆ ಕಾರಣವಾಗಬಾರದು. ಇಷ್ಟು ದಿನದ ಒಳ್ಳೆಯ ಹೆಸರು ಏನಾಗಬೇಕು? ಎಂಬುದಾಗಿ ಪ್ರತಿವಾದ ಮಂಡಿಸಿದರು.

ಸಂತ್ರಸ್ತೆ ಸಮಾಜದಿಂದ ತಿರಸ್ಕೃತಗೊಂಡಿಲ್ಲ. ತನ್ನ ಸಂಸಾರದೊಂದಿಗೆ ಎಂದಿನಂತೆಯೇ ಜೀವನ ಸಾಗಿಸುತ್ತಿದ್ದಾರೆ. ಆಕೆಗೆ ವಿವಾಹವಾಗಿ ಮಕ್ಕಳಾಗಿವೆ. ಜೀವನ ನಡೆಯುತ್ತಿದೆ. ಆದರೆ ಪ್ರಜ್ವಲ್ ಜೀವನ ಮತ್ತು ಹೆಸರು ಹಾಳಾಗಿದೆ. ಪ್ರಜ್ವಲ್ ಯುವಕನಾಗಿದ್ದು ಆತನ ಭವಿಷ್ಯವನ್ನು ಗಮನದಲ್ಲಿಡಬೇಕು. ಈಗಾಗಲೇ ಮಾಧ್ಯಮಗಳಲ್ಲಿ ಆತನ ತೇಜೋವಧೆಯಾಗಿದೆ. ಬಂಧನವಾದ ದಿನದಿಂದಲೂ ಆತ ಜೈಲಿನಲ್ಲಿ ಇದ್ದಾನೆ. ಈಗ ನೀವು ಕೊಡುವ ತೀರ್ಪು ಆತನ ಭವಿಷ್ಯಕ್ಕೆ ಮುಳ್ಳಾಗಬಾರದು ಎಂದು ನಳಿನಾ ಮಾಯಾಗೌಡ ಕೋರ್ಟ್ ಗೆ ಮನವಿ ಮಾಡಿದರು.

ಅವರ ರಾಜಕೀಯ ಸ್ಥಾನಮಾನ ತೀವ್ರ ಶಿಕ್ಷೆಗೆ ಕಾರಣವಾಗಬಾರದು. ಚುನಾವಣೆ ಗೆಲ್ಲುವ ವೇಳೆ ಇಂತಹ ವಿಡಿಯೋ ಹರಿ ಬಿಡಲಾಗಿದೆ. ಸಂತ್ರಸ್ತೆಗಿಂತ ಅಪರಾಧಿಗೆ ಹೆಚ್ಚಿನ ಹಾನಿಯಾಗಿದೆ ಎಂದಾಗ ಪ್ರಜ್ವಲ್ ಪರ ವಕೀಲರ ವಾದಕ್ಕೆ ಬಿಎನ್ ಜಗದೀಶ್ ಇದೇ ವೇಳೆ ಅಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಸಂತ್ರಸ್ತೆ ಸಾಮಾನ್ಯ ಜೀವನ ನಡೆಸುತ್ತಿದ್ದಾಳೆ ಎಂಬ ಹೇಳಿಕೆಗೂ ಆಕ್ಷೇಪ ವ್ಯಕ್ತಪಡಿಸಿದರು. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಹೀಗೆ ಹೇಳುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನೀವು ಹೇಳುವುದು ಏನಾದರೂ ಇದೆಯಾ ಎಂದು ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಪ್ರಶ್ನೆ ಮಾಡಿತು. ಅದಕ್ಕೆ ಪ್ರಜ್ವಲ್ ನಾವು ಹಲವು ಮಹಿಳೆಯರೊಂದಿಗೆ ಇಂತಹ ಘಟನೆ ಮಾಡಿದ್ದೇನೆ ಅಂತ ಸರ್ಕಾರದ ಪರ ವಕೀಲರು ಹೇಳಿಕೆ ನೀಡಿದ್ದಾರೆ. ನಾನು ಸಂಸದನಾದ ವೇಳೆ ಯಾರು ಇಂತಹ ಆರೋಪ ಮಾಡಿರಲಿಲ್ಲ. ನಾನು ರೇಪ್ ಮಾಡಿದರೆ ಅವರು ಯಾರಿಗೂ ಏಕೆ ಹೇಳಲಿಲ್ಲ? ಚುನಾವಣೆ ವೇಳೆ ಇಂತಹ ಆರೋಪ ಮಾಡಿದ್ದಾರೆ. ರೇಪ್ ಮಾಡಿದ್ದೇನೆ ಎಂದು ಹೇಳಲು ಯಾರು ಮುಂದೆ ಬಂದಿರಲಿಲ್ಲ. ಯಾವ ಮಹಿಳೆಯು ಕೂಡ ರೇಪ್ ಮಾಡಿದ್ದೇನೆ ಎಂದು ಹೇಳಲು ಮುಂದೆ ಬಂದಿರಲಿಲ್ಲ. ಆದರೆ ಪೊಲೀಸರು ಇಂತಹ ಕೆಲಸ ಮಾಡಿದ್ದಾರೆ. ಕೋರ್ಟ್ ಯಾವುದೇ ಆದೇಶ ನೀಡಿದ್ರು ಅದಕ್ಕೆ ನಾನು ತಲೆಬಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಇಂಗ್ಲಿಷ್ನಲ್ಲಿ ಕೋರ್ಟಿಗೆ ತಿಳಿಸಿದರು.

ತಂದೆ-ತಾಯಿಗಳನ್ನು ಆರು ತಿಂಗಳಿನಿಂದ ನಾನು ನೋಡಿಲ್ಲ. ಈ ವೇಳೆ ಜಡ್ಜ್ ನೀವು ಏನು ಓದಿದ್ದೀರಾ? ಅಂತ ಪ್ರಶ್ನೆ ಮಾಡಿದರು. ಈ ವೇಳೆ ನಾನು ಮೆಕ್ಯಾನಿಕಲ್ ಇಂಜಿನಿಯರ್ ಓದಿದ್ದೇನೆ ಎಂದು ಪ್ರಜ್ವಲ್ ರೇವಣ್ಣ ಅಳುತ್ತಾ ತಿಳಿಸಿದರು. ನಾನು ಮೆರಿಟ್ ವಿದ್ಯಾರ್ಥಿ, ನಾನು ಮಾಡಿದ ಒಂದೇ ತಪ್ಪೆಂದರೆ ರಾಜಕೀಯದಲ್ಲಿ ಬೇಗ ಬೆಳೆದಿದ್ದು. ಅದೇ ನನಗೆ ಇವತ್ತು ಮುಳುವಾಗಿದೆ ಅಂತ ಪ್ರಜ್ವಲ್ ರೇವಣ್ಣ ಅತ್ತರು. ನಾನು ಮಾಧ್ಯಮಗಳನ್ನು ಈ ವಿಚಾರದಲ್ಲಿ ಎಂದಿಗೂ ದೂಷಿಸುವುದಿಲ್ಲ ಎಂದು ತಿಳಿಸಿದರು. ಆ ವಿಚಾರಣೆಯ ಬಳಿಕ ಆದೇಶವನ್ನು ಜಡ್ಜ್ 2.45ಕ್ಕೆ ಕಾಯ್ದಿರಿಸಿದ್ದರು.

ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತನ್ನ ಶಿಕ್ಷೆಯ ಪ್ರಮಾಣ ಕುರಿತಾದಂತ ತೀರ್ಪು ಪ್ರಕಟಿಸಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ  ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ. ಅಲ್ಲದೇ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಇಂದಿನಿಂದಲೇ ಶಿಕ್ಷೆ ಆರಂಭಗೊಳ್ಳಲಿದೆ. ಇಲ್ಲಿಯವರೆಗಿನ ಜೈಲುವಾಸ ಮೈನಸ್ ಆಗುವುದಿಲ್ಲ. ಏಕೆಂದರೇ ಈ ಪ್ರರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನವಾಗಿರಿಲಿಲ್ಲ. ಕೇವಲ ಬಾಡಿ ವಾರಂಟ್ ಮೇಲೆ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲಾಗಿತ್ತು. ಅಪರಾಧಿಗೆ ತೀರ್ಪಿನ ಪ್ರತಿ ಉಚಿತವಾಗಿ ನೀಡಲು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಸೀಲ್ ಹಾಕಿದ ಬಳಿಕ ಉಚಿತ ಕಾಪಿ ಒದಗಿಸಲು ಸೂಚಿಸಲಾಗಿದೆ.

354 (ಎ) ಸೆಕ್ಷನ್ ಅಡಿಯಲ್ಲಿ ಮೂರು ವರ್ಷ ಸೆರೆವಾಸ, 25,000 ದಂಡವನ್ನು ವಿಧಿಸಲಾಗಿದೆ. 354(ಬಿ) ಸೆಕ್ಷನ್ ಅಡಿಯಲ್ಲಿ 7 ವರ್ಷ ಸೆರೆವಾಸ, 50,000 ದಂಡವನ್ನು ಹಾಕಲಾಗಿದೆ. 354(ಸಿ) ಸೆಕ್ಷನ್ ಅಡಿಯಲ್ಲಿ ಮೂರು ವರ್ಷ ಸೆರೆವಾಸ, 25,000 ದಂಡವನ್ನು, 506 ಸೆಕ್ಷನ್ ಅಡಿಯಲ್ಲಿ 2 ವರ್ಷ ಸೆರೆವಾಸ 10,000 ದಂಡವನ್ನು ಹಾಕಲಾಗಿದೆ. 201 ಸೆಕ್ಷನ್ ಅಡಿಯಲ್ಲಿ 3 ವರ್ಷ ಸೆರೆವಾಸ 25,000 ದಂಡವನ್ನು ಹಾಕಿದ್ದರೇ, ಐಡಿ ಕಾಯ್ದೆ ಸೆಕ್ಷನ್ 66(ಇ) ಅಡಿಯಲ್ಲಿ ಮೂರು ವರ್ಷ 25,000 ದಂಡ ವಿಧಿಸಲಾಗಿದೆ. ದಂಡದ ಹಣದಲ್ಲಿ 11 ಲಕ್ಷ ರೂಪಾಯಿಯನ್ನು ಸಂತ್ರಸ್ತೆಗೆ ನೀಡುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular