ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಲ್ಲಿ ಕೆಂಪು ಕಲ್ಲು, ಮರಳು ಅಭಾವ ಸೃಷ್ಟಿಗೆ ಹಿಂದಿನ ಬಿಜೆಪಿ ಸರಕಾರ ಕಾರಣ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ. ಅವರು ಇಂದು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪು ಕಲ್ಲು, ಮರಳು ಸಿಗುತ್ತಿಲ್ಲವೆಂದು ರಸ್ತೆಯಲ್ಲಿ ನಿಂತು ಮಾತನಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯಲ್ಲ. ಆದರೆ ದ.ಕ. ಜಿಲ್ಲೆಯ ಬಿಜೆಪಿ ಶಾಸಕರು ಅದನ್ನೇ ಮಾಡುತ್ತಿದ್ದಾರೆ. ಅವರು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿ ಎಂದು ಹೇಳಿದರು.
ಮರಳು, ಕೆಂಪುಕಲ್ಲು ಸಿಗದ ಕಾರಣದಿಂದಾಗಿ ಜನ ಸಾಮಾನ್ಯರಿಗೆ, ಕಟ್ಟಡ ಕಾರ್ಮಿಕರಿಗೆ ಸಮಸ್ಯೆ ಆಗಿದೆ. ಕೆಂಪು ಕಲ್ಲಿಗೆ ಕೇರಳದಲ್ಲಿ ರಾಯಲ್ಟಿ ಕಡಿಮೆ ಇದೆ. ನಮ್ಮಲ್ಲಿ ರಾಯಲ್ಟಿ ಜಾಸ್ತಿ ಇದೆ. ಕೆಂಪು ಕಲ್ಲು ರಾಯಲ್ಟಿ ಕೇರಳದಲ್ಲಿ 32 ರೂ., ಇದ್ದರೆ ರಾಜ್ಯದಲ್ಲಿ 280 ರೂ. ಇದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಪರ್ಮಿಟ್ ನೀಡುವ ಕಾರ್ಯ ಆರಂಭಗೊಂಡರೆ ಸಮಸ್ಯೆ ನಿವಾರಣೆಯಾಗಲಿದೆ. ಬಿಜೆಪಿ ಶಾಸಕರಿಗೆ ಜನರ ಕಾಳಜಿ ಇದ್ದರೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿ ಎಂದರು.