ಮೈಸೂರು: ರಾಜ್ಯದೆಲ್ಲೆಡೆ ದಸರಾ ಸಂಭ್ರಮಚರಣೆ ಮನೆ ಮಾಡಿದ್ದು, ಮೈಸೂರಿನಲ್ಲಂತೂ ಹಬ್ಬದ ವಾತಾವರಣ ಕಳೆಗಟ್ಟಿದೆ. ಅದರಂತೆ ಇಂದು ಮುಂಜಾನೆ 6 ಗಂಟೆಯಿಂದಲೇ ಅರಮನೆಯಲ್ಲಿ ಪೂಜಾ ಕಾರ್ಯಕ್ರಮದ ಸಂಭ್ರಮ ಮನೆ ಮಾಡಿದೆ.
ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನಡೆಯಲಿದೆ.. ರಾಜ ಪರಂಪರೆಯಂತೆ ಬೆಳಗ್ಗೆ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಯದುವೀರ್, ಪೂಜಾ ಕೈಂಕರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಬೆಳಗ್ಗೆ 6 ಗಂಟೆಯಿಂದಲೇ ಚಂಡಿ ಹೋಮ ಪೂಜಾ ವಿಧಿ ವಿಧಾನ ಆರಂಭವಾಗಿದ್ದು, 9 ಗಂಟೆಗೆ ಚಂಡಿ ಹೋಮ ಪೂರ್ಣಾಹುತಿಯಾಗಿದೆ. ಇದೀಗ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನ ಆಗಮನವಾಗುತ್ತದೆ.
ಬಳಿಕ ಮಹಾರಾಜ ಯದುವೀರ್ ಚಾಮರಾಜ ಕೃಷ್ಣರಾಜ ಒಡೆಯರ್, ಯುವರಾಜ, ಪತ್ನಿ ತ್ರಿಷಿಕಾ ಕುಮಾರಿ ದೇವಿ ಅವರು ಕಲ್ಯಾಣ ಮಂಟಪಕ್ಕೆ ಆಗಮಿಸಿ ಮದ್ಯಾಹ್ನ 12.06 ರಿಂದ ಆಯುಧ ಪೂಜೆ ಕೈಂಕಾರ್ಯವನ್ನು ಪ್ರಾರಂಭಿಸುತ್ತಾರೆ. ಜೊತೆಗೆ ಐಷಾರಾಮಿ ಕಾರುಗಳಿಗೆ, ರಥ, ನಂದಿಧ್ವಜ ಸ್ಥಂಬ, ಶಸ್ತ್ರಾಸ್ತ್ರ, ಫಿರಂಗಿಗಳಿಗೆ ಪೂಜೆ ಮಾಡಲಾಗುವುದು.
ಸೋಮೇಶ್ವರ ದೇಗುಲಕ್ಕೆ ಪಟ್ಟದ ಕತ್ತಿಯ ಜೊತೆಗೆ ಪಲ್ಲಕ್ಕಿ ಹೊರಟಿತು. ಪಟ್ಟದ ಆನೆಗಳು. ಪಟ್ಟದ ಕುದುರೆಗಳ ಜೊತೆಗೆ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗಿದೆ. ಇನ್ನು ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್ ನಡೆಸಿದ ನಂತರ ಸಿಂಹಾಸನದಲ್ಲಿ ಜೋಡಿಸಲಾದ ಸಿಂಹದ ತಲೆಯನ್ನು ವಿಸರ್ಜನೆ ಮಾಡಲಾಗುತ್ತದೆ.