Monday, November 3, 2025
Google search engine

HomeUncategorizedರಾಷ್ಟ್ರೀಯಹೈದರಾಬಾದ್​ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್​ ಬೆಂಕಿಗೆ ಆಹುತಿ

ಹೈದರಾಬಾದ್​ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್​ ಬೆಂಕಿಗೆ ಆಹುತಿ

ಕರ್ನೂಲ್​: ಹೈದರಾಬಾದ್​ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್​ ಬೆಂಕಿಗೆ ಆಹುತಿಯಾಗಿದೆ. ಬಸ್​ನಲ್ಲಿದ್ದ 20 ಪ್ರಯಾಣಿಕರು ಸಜೀವ ದಹನವಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ.

ಕರ್ನೂಲ್​ ಉಪನಗರ ಚಿನ್ನಟೇಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ವೇಮುರಿ ಕಾವೇರಿ ಟ್ರಾವೆಲ್ಸ್​ಗೆ ಸೇರಿದ ಬಸ್​ ಬೆಂಕಿಗಾಹುತಿಯಾಗಿದೆ. ಅವಘಡದಲ್ಲಿ 20 ಮಂದಿ ಜೀವಂತ ಸುಟ್ಟುಹೋಗಿದ್ದು, 19 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬಸ್ಸಿನಲ್ಲಿ ಇಬ್ಬರು ಚಾಲಕರು ಸೇರಿ 43 ಜನರಿದ್ದರು. ಈ ಪೈಕಿ 39 ಮಂದಿ ವಯಸ್ಕರು ಮತ್ತು ಇಬ್ಬರು ಚಿಕ್ಕ ಮಕ್ಕಳು ಸೇರಿ 41 ಜನ ಪ್ರಯಾಣಿಕರಿದ್ದರು. ಇವರಲ್ಲಿ 10 ಜನ ಮಹಿಳೆಯರಿದ್ದರು. ಈವರೆಗೆ 19 ಶವಗಳನ್ನು ಹೊರತೆಗೆಯಲಾಗಿದ್ದು, ಅವರನ್ನು ಗುರುತಿಸುವ ಪ್ರಕ್ರಿಯೆ ಮುಂದುವರೆದಿದೆ. ಸುರಕ್ಷಿತವಾಗಿರುವ 19 ಜನರನ್ನು ಗುರುತಿಸಲಾಗಿದ್ದು, ಅವರಲ್ಲಿ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಐಜಿ ಪ್ರವೀಣ್ ಮಾಹಿತಿ ನೀಡಿದ್ದಾರೆ.

ರಾತ್ರಿ 10.30ಕ್ಕೆ ಹೈದರಾಬಾದ್​ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್​ಗೆ ಕರ್ನೂಲ್ ನಗರದ ಹೊರವಲಯದಲ್ಲಿರುವ ಉಲಿಂದಕೊಂಡ ಬಳಿ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಬಸ್‌ನ ಕೆಳಗೆ ಹೋಗಿ ಇಂಧನ ಟ್ಯಾಂಕ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಬಸ್ ಹೊತ್ತಿ ಉರಿದಿದೆ.

ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರು ಎಚ್ಚರಗೊಂಡು, ಕೆಲವರು ಸಹಾಯಕ್ಕಾಗಿ ಕಿರುಚಿಕೊಂಡು, ಬಸ್ಸಿನ ತುರ್ತು ಬಾಗಿಲು ಮುರಿದು ಹೊರಬಂದರೆ, ಇನ್ನೂ ಹಲವರು ಬೆಂಕಿಯಲ್ಲಿ ಸಿಲುಕಿಕೊಂಡು ಸಜೀವ ದಹನವಾಗಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಕರ್ನೂಲ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಗರದವರು ಎಂದು ವರದಿಯಾಗಿದೆ.

ಬಸ್ಸಿನ ಮುಖ್ಯ ಚಾಲಕ ಕಾಣೆಯಾಗಿದ್ದಾನೆ. ಮತ್ತೊಬ್ಬ ಚಾಲಕನನ್ನು ಬಂಧಿಸಲಾಗಿದೆ.

ಸ್ಥಳೀಯರ ಮಾಹಿತಿ ಆಧರಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಆದರೆ ಅದಾಗಲೇ ತೀವ್ರ ಬೆಂಕಿಯಿಂದಾಗಿ ಬಸ್​ ಸಂಪೂರ್ಣವಾಗಿ ಸುಟ್ಟುಹೋಗಿತ್ತು.

ಘಟನೆ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಕ್ಷಣ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು, ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಮತ್ತು ಮೃತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡುವಂತೆ ನಿರ್ದೇಶಿಸಿದ್ದಾರೆ.

ಮೃತರ ಕುಟುಂಬಕ್ಕೆ 2ಲಕ್ಷ ಘೋಷಣೆ

ಕರ್ನೂಲ್​ ಬಸ್​ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ PMNRF ನಿಂದ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಹಾಗೆಯೇ ತೆಲಂಗಾಣ ರಾಜ್ಯ ಸರ್ಕಾರವು ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಪರಿಹಾರ ತೆಲಂಗಾಣದ ನಾಗರಿಕರಿಗೆ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular