ಮೈಸೂರು : ಆಷಾಢ ಮಾಸದ ಹಿನ್ನೆಲೆಯಲ್ಲಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ.
ಜುಲೈ 17ರಿಂದ ಆಗಸ್ಟ್ 7ರವರೆಗೆ ನಡೆಯುವ ಆಷಾಢ ಮಾಸದ ಎಲ್ಲಾ ಶುಕ್ರವಾರಗಳು, ಶನಿವಾರ–ಭಾನುವಾರ ಹಾಗೂ ಆಗಸ್ಟ್ 4ರಂದು ನಡೆಯಲಿರುವ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಉತ್ಸವದಂದು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಭಕ್ತರ ಅನುಕೂಲಕ್ಕಾಗಿ ಲಲಿತಮಹಲ್ ಪ್ಯಾಲೇಸ್ ಮೈದಾನ ಹಾಗೂ ಹೆಲಿಪ್ಯಾಡ್ ಬಳಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಮ್ಮ ವಾಹನಗಳನ್ನು ಅಲ್ಲಿ ನಿಲ್ಲಿಸಿ, ಜಿಲ್ಲಾಡಳಿತ ಹಾಗೂ ಕೆಎಸ್‌ಆರ್‌ಟಿಸಿ ವತಿಯಿಂದ ಒದಗಿಸಲಾಗಿರುವ ಉಚಿತ ವಿಶೇಷ ಶಟಲ್ ಬಸ್‌ಗಳ ಮೂಲಕ ಬೆಟ್ಟ ತಲುಪಬಹುದು. ಈ ಉಚಿತ ಬಸ್ ಸೇವೆ ಬೆಳಗ್ಗೆ 6.30ರಿಂದ ರಾತ್ರಿ 8.30ರವರೆಗೆ ಲಭ್ಯವಿರಲಿದೆ.
ಮೆಟ್ಟಿಲುಗಳ ಮೂಲಕ ಚಾಮುಂಡಿಬೆಟ್ಟ ಹತ್ತುವ ಭಕ್ತರಿಗೆ ಬೆಳಗ್ಗೆ 5 ಗಂಟೆಯ ನಂತರ ಮಾತ್ರ ಅವಕಾಶ ನೀಡಲಾಗಿದ್ದು, ಮಾರ್ಗದಲ್ಲಿ ಕುಡಿಯುವ ನೀರು ಹಾಗೂ ಹಾಲಿನ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ ಭಕ್ತರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಧರ್ಮದರ್ಶನದ ಜೊತೆಗೆ ₹2,000 ಮುಖಬೆಲೆಯ ವಿಶೇಷ ಶೀಘ್ರ ದರ್ಶನ ಟಿಕೆಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಭಕ್ತರು ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಿ ಸುಗಮ ದರ್ಶನಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ.



