ಬೆಂಗಳೂರು : ಆರ್‌ಎಸ್‌ಎಸ್ ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು. ನಾವು ನೆರಳಿನ ಜೊತೆ ಹೋರಾಟ ಮಾಡಬಾರದು. ದೆವ್ವದ ಜೊತೆ ಹೋರಾಟ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಮುಖ್ಯಸ್ಥರು ಧರ್ಮ ಉಳಿಸಲು ಮೂರು ಮೂರು ಮಕ್ಕಳನ್ನ ಹೆರಬೇಕು ಎನ್ನುತ್ತಾರೆ. ಆದರೆ ಅವರು ಮಾತ್ರ ಬ್ರಹ್ಮಚಾರಿಗಳಾಗಿ ಇರುತ್ತಾರೆ, ಇದೆಂತದ್ದು? ಧರ್ಮ ಜಾತಿಗಳ ನಡುವೆ ಜಗಳ ಹಚ್ಚುವವರೇ ದೇಶದ ದ್ರೋಹಿಗಳು ಅಂತಾ ಅಂಬೇಡ್ಕರ್ ಹೇಳಿದ್ದಾರೆ. ಮನುವಾದ ಪ್ರತಿಪಾದನೆ ಮಾಡೋರು ಸಂವಿಧಾನ ಎತ್ತಿ ಹಿಡಿತಾರಾ ಎಂದು ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿದರು.
ಅಮಿತ್ ಶಾ ಅವರು ಸದನದಲ್ಲಿ ಅಂಬೇಡ್ಕರ್ ಹೆಸರು ಹೇಳೋದು ಫ್ಯಾಷನ್ ಆಗಿದೆ ಎಂದು ಹೇಳಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಅಮಿತ್ ಶಾ ಹೀಗೆ ಹೇಳೋದು ಅಹಂಕಾರ ಅಲ್ವಾ? 57 ವರ್ಷ ಆದರೂ ಆರ್‌ಎಸ್‌ಎಸ್ ನಮ್ಮ ದೇಶದ ಬಾವುಟವನ್ನ ಹಾರಿಸಲೇ ಇಲ್ಲ. ಅವರಿಗೆ ಫಂಡಿಂಗ್ ಹೇಗೆ ಬರುತ್ತದೆ ಅಂತಾ ಕೇಳಿದರೆ ಅವರ ಬಳಿ ಉತ್ತರವೇ ಇಲ್ಲ. ಕೊನೆಗೆ ಅದಕ್ಕೆ ಉತ್ತರ ಕೊಡಲು ಮೋಹನ್ ಭಾಗವತ್ ಅವರೇ ಬೆಂಗಳೂರಿಗೆ ಬಂದರು. ಆರ್‌ಎಸ್‌ಎಸ್ ರಿಜಿಸ್ಟರ್ ಮಾಡುವ ಅಗತ್ಯತೆ ಇಲ್ಲ ಎಂದು ಹೇಳುತ್ತಾರೆ. ಇವತ್ತಲ್ಲ ನಾಳೆ ಆರ್‌ಎಸ್‌ಎಸ್ ರಿಜಿಸ್ಟರ್ ಆಗಲೇಬೇಕು. ಇಲ್ಲವೇ ನಾನೇ ಮಾಡಿಸ್ತೀನಿ ಎಂದು ಸವಾಲ್ ಹಾಕಿದರು.
ಆರ್‌ಎಸ್‌ಎಸ್‌ನವರು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಯಾವುದೇ ಟ್ಯಾಕ್ಸ್ ಕಟ್ಟುತ್ತಿಲ್ಲ. ಡೊನೇಷನ್ ತೆಗೆದುಕೊಳ್ಳಲ್ಲ, ಬರೀ ಗುರುದಕ್ಷಿಣೆ ತೆಗೆದುಕೊಳ್ಳುತ್ತಾರೆ. ಗುರುದಕ್ಷಿಣೆ ಅಂದರೆ ಧ್ವಜದ ಹೆಸರಿನಲ್ಲಿ ಹಣ ಸಂಗ್ರಹ ಮಾಡುತ್ತಾರೆ. ಆರ್‌ಎಸ್‌ಎಸ್ ಇಲ್ಲ ಅಂದರೆ ಬಿಜೆಪಿ ಜೆಡಿಎಸ್‌ಗಿಂತಾ ಕಡೆಯಾಗಲಿದೆ ಎಂದು ಕಿಡಿಕಾರಿದರು.
ರಾಜಕೀಯ ನಾಯಕರ ಮಕ್ಕಳು ಧರ್ಮದ ಹೋರಾಟದಲ್ಲಿ ಇಲ್ಲ. ಖರ್ಗೆ, ಯಡಿಯೂರಪ್ಪ, ಅಶೋಕ್ ಮಕ್ಕಳು ಏನು ಮಾಡುತ್ತಿದ್ದಾರೆ. ಎಲ್ಲವನ್ನು ಗಮನಿಸಿ. ನಮ್ಮ ಮಗ ವಿದೇಶದಲ್ಲಿ ಓದುತ್ತಿದ್ದರು ನಿಮ್ಮ ಮಕ್ಕಳು ವಿದೇಶದಲ್ಲಿ ಓದಬೇಕು ಅಂತಾನೆ ನಾನು ಹೇಳೋದು. ಬಿಜೆಪಿಯವರ ನಡೆ ನುಡಿಗೂ ಬಹಳ ವ್ಯತ್ಯಾಸವಿದೆ. ಇದ್ದಿದ್ದು ಇದ್ದಹಾಗೆ ಹೇಳುತ್ತೇವೆ. ಅದಕ್ಕೆ ಜನ ಇಷ್ಟಪಡಲ್ಲ. ನಾವು ಹಿಂದೊಂದು ಮುಂದೊಂದು ಮಾತನಾಡಲ್ಲ ಅಂತ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.



