Thursday, December 11, 2025
Google search engine

Homeರಾಜ್ಯಸುದ್ದಿಜಾಲವಿಧಾನಸಭೆಯಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ಮಸೂದೆ ಮಂಡನೆ; ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು.

ವಿಧಾನಸಭೆಯಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ಮಸೂದೆ ಮಂಡನೆ; ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ಸಭೆ- ಪಂಚಾಯ್ತಿ ಮೂಲಕ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ನಿಷೇಧಿಸುವ ಮತ್ತು ಅಪರಾಧೀಕರಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ.

ಈ ಮಸೂದೆಯು ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಬಹಿಷ್ಕಾರ ಹಾಕುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ನೀಡುತ್ತದೆ.

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಇಂದು ವಿಧಾನಸಭೆಯಲ್ಲಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025’ ಅನ್ನು ಮಂಡಿಸಿದ್ದು, ಅದರಲ್ಲಿ 20 ರೀತಿಯ ಸಾಮಾಜಿಕ ಬಹಿಷ್ಕಾರಗಳನ್ನು ಪಟ್ಟಿ ಮಾಡಿದ್ದಾರೆ.

ಮಸೂದೆಯಲ್ಲಿ ಯಾವುದೇ ವ್ಯಕ್ತಿ, ಕುಟುಂಬದೊಂದಿಗೆ ವ್ಯವಹರಿಸಲು ನಿರಾಕರಿಸುವುದು, ಅವರ ಕೆಲಸ ಮಾಡಲು ಅಥವಾ ವ್ಯಾಪಾರ ಮಾಡಲು ನಿರಾಕರಿಸುವುದು; ಸೇವೆಗಳನ್ನು ನಿರಾಕರಿಸಿದರೆ ಜೈಲು ಶಿಕ್ಷ ಗ್ಯಾರಂಟಿ ಎಂದು ಹೇಳಲಾಗಿದೆ.

ರಾಜ್ಯದ ವಿವಿಧ ಸಮುದಾಯಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವುದು, ಜಾತಿ ಸಭೆ ಅಥವಾ ಸಮುದಾಯ ಪಂಚಾಯತ್‌ಗಳ ಮೂಲಕ ವಿವಿಧ ಶಿಕ್ಷೆಗಳನ್ನು ವಿಧಿಸುವ ಅಸಂವಿಧಾನಿಕ ಪದ್ಧತಿಗಳು ಇನ್ನೂ ಆಚರಣೆಯಲ್ಲಿವೆ. ಇದರ ಪರಿಣಾಮವಾಗಿ ವ್ಯಕ್ತಿಗಳು ಅಥವಾ ಕುಟುಂಬ ತಮ್ಮ ಜೀವನವನ್ನು ಘನತೆಯಿಂದ ನಡೆಸುವಲ್ಲಿ ಹೆಚ್ಚಿನ ಕಿರುಕುಳ ಅನುಭವಿಸುತ್ತಾರೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

“ಗ್ರೇಟರ್ ಬೆಂಗಳೂರು ಆಡಳಿತ(ಎರಡನೇ ತಿದ್ದುಪಡಿ)ಮಸೂದೆ 2025 ಮಂಡನೆ

ಇದೇ ವೇಳೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪರವಾಗಿ ಸಚಿವ ಮಹದೇವಪ್ಪ ಅವರು “ಗ್ರೇಟರ್ ಬೆಂಗಳೂರು ಆಡಳಿತ(ಎರಡನೇ ತಿದ್ದುಪಡಿ)ಮಸೂದೆ 2025 ಅನ್ನು ಮಂಡಿಸಿದರು. ಈ ಮಸೂದೆಯಲ್ಲಿ ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆ ಮತ್ತು ರಾಜ್ಯ ವಿಧಾನ ಪರಿಷತ್ತಿನ ಸದಸ್ಯರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯರನ್ನಾಗಿ ಸೇರಿಸಲು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024ಕ್ಕೆ ತಿದ್ದುಪಡಿ ಮಾಡಲಾಗಿದೆ.

ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಪ್ರಾಧಿಕಾರದ ಎಕ್ಸ್-ಆಫಿಸಿಯೊ ಸದಸ್ಯರನ್ನಾಗಿ ಸೇರಿಸಲು ಸಹ ಇದು ಅವಕಾಶ ನೀಡುತ್ತದೆ.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಿಸಲು ಸಹ ಇದು ಅವಕಾಶ ಕಲ್ಪಿಸುತ್ತದೆ.

RELATED ARTICLES
- Advertisment -
Google search engine

Most Popular