ಮಂಚೇನಹಳ್ಳಿ: ಕರ್ನಾಟಕ ಸರ್ಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ವಾರ್ತಾ ಮತ್ತು ಸಾರ್ವಜನಿಕಸಂಪರ್ಕ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆ ವತಿಯಿಂದ 2025-2026 ನೇ ಸಾಲಿನ ಗ್ರಾಮ ಸಂಪರ್ಕ ಕಾರ್ಯಕ್ರಮಗಳು ಮತ್ತು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಗ್ರಾಮೀಣ ಯುವ ಕಲಾ ಸಂಘ ಗೊಟ್ಲಗುಂಟೆ ಗೌರಿಬಿದನೂರು ಇವರ ವತಿಯಿಂದ ಜಿಲ್ಲೆಯ ಆಯ್ದ 20 ಹಳ್ಳಿಗಳಲ್ಲಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಸ್ವಾಮಿ ಖಂಜರ ಬಾರಿಸುವ ಮೂಲಕ ಚಾಲನೆ ನೀಡಿದ್ದು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಇನ್ನೂ ಈ ಮೂಲಕ ಜನರಿಗೆ ಬೀದಿ ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಮತ್ತು ಯುವ ನಿಧಿ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಅವುಗಳ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ನೋಂದಣಿ ಪ್ರಕ್ರಿಯೆಗೆ ಸಹಾಯ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಮೂಲಕ, ಸರ್ಕಾರದ ಯೋಜನೆಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ನಮ್ಮ ಗ್ರಾಮಿಣ ಯುವ ಕಲಾ ಸಂಘದ ವತಿಯಿಂದ ಸಾರ್ವಜನಿಕರಿಗೆ ಬೀದಿ ನಾಟಕದ ಮುಖಾಂತರ ಜಾಗೃತಿ ಮೂಡಿಸಲು ಯೋಜನೆ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಗೊಟ್ಲಗುಂಟೆ ವೆಂಕಟರೋಣಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಬಿ.ಕೃಷ್ಣ, ಶಿಕ್ಷಕ ಅಮರೇಶ್, ನಾರಾಯಣಪ್ಪ ಅಶ್ವತ್ಥಪ್ಪ, ಮಣಿ ಕುಮಾರ್, ಬಾಲಮ್ಮ, ಕೋಮಲ, ವಿಜಯಲಕ್ಷ್ಮಿ, ಗ್ರಾಮೀಣ ಕಲಾ ಸಂಘದ ಕಲಾವಿದರಾದ ರೋಜಮ್ಮ, ಶಮೀರ, ಬಾಲಕೃಷ್ಣ.ಬಿ , ವೆಂಕಟಸ್ವಾಮಿ, ಎನ್.ಬಾಲಪ್ಪ, ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.



