ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರೋ ಜನರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಕರ್ನಾಟಕ ಆಸ್ತಿ ನೋಂದಣಿ ಶುಲ್ಕ ಶುಲ್ಕ ಹೆಚ್ಚಾಗಲಿದೆ.
ಕರ್ನಾಟಕ ಸರ್ಕಾರವು ಆಸ್ತಿ ನೋಂದಣಿ ಶುಲ್ಕವನ್ನು ದುಪ್ಪಟ್ಟು ಮಾಡಲು ತೀರ್ಮಾನ ಮಾಡಿದೆ. ಆ ಮೂಲಕ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಆಘಾತ ನೀಡಿದೆ. ಆಗಸ್ಟ್ 31ರಿಂದ ಪರಿಷ್ಕೃತ ಆಸ್ತಿ ನೋಂದಣಿ ಶುಲ್ಕ ಜಾರಿಗೆ ಬರಲಿದೆ.
ಆಸ್ತಿ ನೋಂದಣಿ ಶುಲ್ಕ ಶೇ.1ರಿಂದ ಶೇ.2ರಷ್ಟು ಏರಿಕೆ ಮಾಡಲಾಗಿದ್ದು, ಆ.31ರಿಂದ ಅನ್ವಯವಾಗಲಿದೆ. ನಿವೇಶನ, ಭೂಮಿ, ಫ್ಲ್ಯಾಟ್, ಮನೆ ಸೇರಿದಂತೆ ಸ್ಥಿರಾಸ್ತಿ ಖರೀದಿ ವೇಳೆ ಶೇ.1ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6ರಷ್ಟು ಮುದ್ರಾಂಕ ಶುಲ್ಕ ಸೇರಿ ಶೇ.6.6ರಷ್ಟು ಶುಲ್ಕ ಇತ್ತು. ಆದರೆ ಈಗ ಏರಿಕೆಯಿಂದ ಒಟ್ಟು ಶೇ.7.6ರಷ್ಟು ಶುಲ್ಕ ಕಟ್ಟಬೇಕು. ಈ ಕುರಿತಾಗಿ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಎಲ್ಲಾ ಸಬ್ ರಿಜಿಸ್ಟ್ರಾರ್ ಗಳಿಗೆ ಸೂಚನೆ ನೀಡಿದೆ.
2025-26 ರ ಮೊದಲ ತ್ರೈಮಾಸಿಕದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದಾಯದ ಗುರಿಗಳನ್ನು ತಲುಪುವಲ್ಲಿ ವಿಫಲಗಿ ತೀವ್ರ ಕುಸಿತ ಕಂಡು ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇನ್ನು, ಬೆಂಗಳೂರಿನ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದೊಡ್ಡ ಶಾಕ್ ನೀಡುತ್ತಿದ್ದು, ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲವೊಂದು ಅವಕಾಶಗಳನ್ನು ನೀಡಿತ್ತು. ಸ್ವಯಂ-ಮೌಲ್ಯಮಾಪನ ಯೋಜನೆ Self-Assessment Scheme (SAS) ಅಡಿಯಲ್ಲಿ ಆಸ್ತಿದಾರರು ತಾವೇ ಆಸ್ತಿಯನ್ನು ಮೌಲ್ಯಮಾಪನ ಮಾಡಿ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ನೀಡಿತ್ತು.
ಆದರೆ ಬೆಂಗಳೂರಿನ ಕೆಲವು ಆಸ್ತಿದಾರರು ಇದನ್ನು ದುರುಪಯೋಗಪಡಿಸಿಕೊಂಡಿದ್ದು, ಕಡಿಮೆ ವಿಸ್ತೀರ್ಣವನ್ನು ತೋರಿಸಿ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಆಸ್ತಿಯ ವಿಸ್ತೀರ್ಣವನ್ನು ಪರಿಶೀಲನೆ ಮಾಡುವ ಉದ್ದೇಶದಿಂದ ಡ್ರೋನ್‌ಗಳನ್ನು ಬಳಸಲಾಗಿದ್ದು, ಇದರಲ್ಲಿ ತಪ್ಪಾದ ಆಸ್ತಿ ಘೋಷಣೆ ಮಾಡಿರುವುದು ಬಹಿರಂಗವಾಗಿದೆ.
ಈ ಹಿನ್ನೆಲೆಯಲ್ಲಿ ತಪ್ಪು ಲೆಕ್ಕ ಕೊಟ್ಟವರಿಗೆ ತಕ್ಕ ಪಾಠ ಕಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಆಸ್ತಿದಾರರಿಗೆ ಮೊದಲು ನೋಟಿಸ್ ನೀಡಿ, ಬಳಿಕ ಬಡ್ಡಿಯೊಂದಿಗೆ ಬಾಕಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಲು ಸೂಚನೆ ನೀಡಲಾಗಿದೆ.