ಮಂಡ್ಯ: ಹೆಣ್ಣು ಭ್ರೂಣ ಪತ್ತೆ-ಹತ್ಯೆ ವಿರೋಧಿಸಿ ಮಹಿಳಾ ಮುನ್ನಡೆ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯದ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯ ಸಂಜಯ್ ವೃತ್ತದಿಂದ ಡಿಸಿ ಕಚೇರಿ ವರಗೆ ಮೆರವಣಿಗೆ ನಡೆಸಿ, ಸರ್ಕಾರ ಹಾಗೂ ಅರೋಗ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿ ಕಚೇರಿ ಬಳಿ ಪ್ರತಿಭಟನಾಕಾರರ ತಡೆದ ಹಿನ್ನಲೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ಏರ್ಪಟ್ಟಿದ್ದು, ಬಳಿಕ ಪ್ರತಿಭಟನೆಗೆ ಪೊಲೀಸರು ಅವಕಾಶ ಕೊಟ್ಟಿದ್ದಾರೆ.

ಹಾಡ್ಯ ಗ್ರಾಮದಲ್ಲಿ ಭ್ರೂಣ ಪತ್ತೆ ಮತ್ತು ಹತ್ಯೆಯ ಕರಾಳ ದಂಧೆ ನಡೆದಿದೆ. ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳದೆ ಬೇಜವಾಬ್ದಾರಿ ತೋರಿದೆ. ದಂಧೆ ಕೋರರು ಸಾಕ್ಷ ನಾಶ ಮಾಡಿಕೊಳ್ಳಲು ಅನುಕೂಲವಾಗುವಂತೆ ಅಧಿಕಾರಿಗಳು ವಿಳಂಬವಾಗಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದರೂ ಅಪರಾಧಿಗಳಿಗೆ ಜಾಮೀನು ಸಿಕ್ಕಿ ಹೋರ ಬರುತ್ತಿರುವುದು ಸರಿಯಾದ ಕ್ರಮ ಅಲ್ಲ. ಸಾಕ್ಷಿ ನಾಶ ಮಾಡಲು ಅಧಿಕಾರಿಗಳೇ ಅವಕಾಶ ಒದಗಿಸಿದಂತೆ ಆಗುತ್ತದೆ. ಇದಕ್ಕೆ ಎಡೆ ಮಾಡಿ ಕೊಡದೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಹೆಣ್ಣು ಭ್ರೂಣ ಹತ್ಯೆ ಜಾಲ ರಾಜ್ಯದ ಎಲ್ಲೆಡೆ ವಿಸ್ತರಿಸಿದೆ. ಉನ್ನತ ಮಟ್ಟದ ತನಿಖೆ ನಡೆಸಿ ಭ್ರೂಣ ಪತ್ತೆ ನಿಷೇಧ ಕಾಯ್ದೆ ಅನ್ವಯ ಕಾನೂನು ಕ್ರಮ ವಹಿಸಬೇಕು. ಹೆಣ್ಣು ಮಕ್ಕಳ ಮೌಲ್ಯ ಮತ್ತು ಮಹತ್ವ ಕುರಿತ ಜಾಗೃತಿ ಫಲಕಗಳನ್ನು ಅಳವಡಿಸಬೇಕು.ಭ್ರೂಣ ಪತ್ತೆ ಹತ್ಯೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವಂತೆ ಆಗ್ರಹಿಸಿದ್ದಾರೆ.