ಹೊಸ ದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ ಮಾರ್ಚ್ ೩೧ರಂದು ಇಂಡಿಯಾ ಮೈತ್ರಿಕೂಟವು ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಿದೆ ಎಂದು ದಿಲ್ಲಿ ಸಚಿವ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ್ ರಾಯ್ ಇಂದು ಭಾನುವಾರ ಪ್ರಕಟಿಸಿದರು.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ರೀತಿಯಿಂದ ದೇಶಾದ್ಯಂತ ಇರುವ ಸಂವಿಧಾನವನ್ನು ಪ್ರೀತಿಸುವ ಮತ್ತು ಗೌರವಿಸುವ ಜನರ ಹೃದಯಗಳಲ್ಲಿ ಸಿಟ್ಟು ಮನೆ ಮಾಡಿದೆ. ಇದು ಕೇವಲ ಅರವಿಂದ್ ಕೇಜ್ರಿವಾಲ್ ಕುರಿತಲ್ಲ, ಸಂಪೂರ್ಣ ವಿರೋಧ ಪಕ್ಷಗಳನ್ನು ಒಂದರ ನಂತರ ಒಂದರಂತೆ ಅಳಿಸಿ ಹಾಕಲಿದೆ ಎಂದು ರಾಯ್ ಹೇಳಿದರು.
ಪ್ರಧಾನಿ ಮೋದಿ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಶಾಸಕರನ್ನು ಖರೀದಿಸಿ ಅಥವಾ ಬೆದರಿಸುವ ಮೂಲಕ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಯಾರು ಮಾರಾಟವಾಗಲು ಸಿದ್ಧರಿಲ್ಲವೊ, ಶರಣಾಗುವುದಿಲ್ಲವೊ ಅಂಥವರ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದೂ ಅವರು ಆರೋಪಿಸಿದರು.
ಮಾರ್ಚ್ ೩೧ರಂದು ನಡೆಯಲಿರುವ ಮಹಾ ಸಮಾವೇಶವು ಕೇವಲ ರಾಜಕೀಯ ಸಮಾವೇಶ ಮಾತ್ರವಲ್ಲ ಬದಲಿಗೆ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಲು ನಡೆಸಲಾಗುತ್ತಿರುವ ಸಮಾವೇಶವಾಗಿದೆ ಎಂದೂ ಅವರು ತಿಳಿಸಿದರು.