ಕೂಳೂರು ಫಲ್ಗುಣಿ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿ ಜಲಚರಗಳೆಲ್ಲ ಸತ್ತು ತೇಲುತ್ತಿವೆ. ನೀರಿನಲ್ಲಿ ಆಮ್ಲಜನಕ ಮಟ್ಟ ಸೊನ್ನೆಗಿಳಿದಿದೆ. ಕೂಳೂರು ಚರ್ಚ್ ಸುತ್ತಮುತ್ತ, ರಾಯಿಕಟ್ಟೆ, ಪಂಜಿಮೊಗರು, ತೋಕೂರು, ಮೇಲ್ ಪ್ಪಳ, ಅತ್ರೆಬೈಲ್, ಬಂಗಕೂಳೂರು, ದಂಬೇಲ್ ಮುಂತಾದ ನದಿ ಪಾತ್ರದ ವ್ಯಾಪ್ತಿಯಲ್ಲಿ ಬಾವಿ ನೀರು ಕಲುಷಿತಗೊಂಡು ಕುಡಿಯಲು ಅಯೋಗ್ಯವಾಗಿದೆ. ನದಿ ನೀರಿನಿಂದ ವಿಪರೀತ ವಾಸನೆ ಬರುತ್ತಿದ್ದು, ಜನರಿಗೆ ವಾಸಿಸಲು ಕಷ್ಟವಾಗುತ್ತಿದೆ. ಇಲ್ಲಿನ ಜಲಮಾಲಿನ್ಯದಿಂದಾಗಿ ಮಾರಕ ಖಾಯಿಲೆಗಳು ಈ ಭಾಗದ ಜನರನ್ನು ಭಾದಿಸುವ ಸಾಧ್ಯತೆ ಇದೆ. ಬಹುಮುಖ್ಯವಾಗಿ ಬೈಕಂಪಾಡಿ ಕೈಗಾರಿಕಾ ವಲಯದಿಂದ ಶುದ್ದೀಕರಿಸದ ಕೈಗಾರಿಕಾ ಮಾಲಿನ್ಯ ನೀರು ನದಿ ಸೇರುತ್ತಿದೆ. ಹಲವು ಮಧ್ಯಮ ಕೈಗಾರಿಕೆಗಳು, ಮೀನು ಸಂಸ್ಕರಣೆ, ಮದ್ಯ ತಯಾರಿಕಾ, ಪಾಮ್ ಆಯಿಲ್ ಘಟಕಗಳು ತ್ಯಾಜ್ಯ ನೀರನ್ನು ನೇರವಾಗಿ ಕುಡುಂಬೂರು, ತೋಕೂರು ಹಳ್ಳಗಳಿಗೆ ಹರಿಸಿರುವುದು ಈ ಹಿಂದೆಯೂ ಸಾಕ್ಷಿ ಸಮೇತ ವರದಿಯಾಗಿದೆ. ಕೈಗಾರಿಕಾ ವಲಯಕ್ಕೆ ಅನ್ವಯ ಆಗುವಂತೆ ಕೇಂದ್ರೀಕೃತ ತ್ಯಾಜ್ಯ ಶುದ್ದೀಕರಣ ಘಟಕವನ್ನು KIADB ಹೊಂದಿಲ್ಲ. ಅದಕ್ಕಾಗಿ ಜಾಗ ಮೀಸಲಿಟ್ಟಿದ್ದರೂ ಕಾರ್ಯಯೋಜನೆ ನಡೆದಿಲ್ಲ. ಮರವೂರು ಡ್ಯಾಮ್ ಬಳಿ ಪಡುಶೆಡ್ಡೆ ಬಳಿ ಪಚ್ಚನಾಡಿಯಿಂದ ಎನ್ನಲಾಗುತ್ತಿರುವ ಬೃಹತ್ ಕೊಳವೆ ಮುಖಾಂತರ ಕೊಳಕು ನೀರನ್ನು ನದಿಗೆ ಬಿಡಲಾಗುತ್ತಿದೆ. ಕೂಳೂರು ಪ್ರದೇಶದಲ್ಲಿ ಕಲ್ಲಿದ್ದಲು, ಅದಿರು ಹುಡಿಯಂತಹ ಕಪ್ಪು ಧೂಳು ಹಾರಿ ಬರುತ್ತಿದ್ದು, ಇದರಿಂದಾಗಿ ವಸತಿ ಪ್ರದೇಶಗಳಲ್ಲಿ ಧೂಳು ಬೀಳುತ್ತಿರುವುದರಿಂದ ವಾಯುಮಾಲಿನ್ಯ ಉಂಟಾಗುತ್ತಿದೆ.
ವಾಹನಗಳ ಮೇಲೆ, ಬಟ್ಟೆಗಳ ಮೇಲೆ ಧೂಳು ಬೀಳುತ್ತಿರುತ್ತದೆ.
ಮಂಗಳೂರು ಮಹಾನಗರ ಪಾಲಿಕೆಯ ತೆರೆದ ಚರಂಡಿಗಳಿಂದಲೂ ಕಲುಷಿತ ನೀರು ಅಲ್ಲಲ್ಲಿ ನದಿ ಸೇರುತ್ತಿದೆ. ಮುಂದಿನ ದಿನಗಳಲ್ಲಿ ಜಲಮಾಲಿನ್ಯ ಮತ್ತು ವಾಯುಮಾಲಿನ್ಯದಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ಆದುದರಿಂದ ತಾವುಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಕ್ರಮಕೈಗೊಳ್ಳಬೇಕು. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ ಎಂದು ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೈಗಾರಿಕಾ ಅಭಿವೃದ್ದಿ ಮಂಡಳಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ. ಮಹೇಶ್ವರಿ, ಕೈಗಾರಿಕಾ ಅಭಿವೃದ್ದಿ ಮಂಡಳಿಯ ಉಪ ಅಭಿಯಂತರರಾದ ಗಣಪತಿ ಅವರು ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಂದನೀಯ ರೆವರೆಂಡ್ ಫಾದರ್ ವಿಕ್ಟರ್ ವಿಜಯ್ ಲೋಬೋ ಕೂಳೂರು ಪರಿಸರದಲ್ಲಿ ನದಿಯ ಮಾಲಿನ್ಯ ಮತ್ತು ಹಾರುತ್ತಿರುವ ಕೋಕ್ ಪೌಡರ್ ಸಮಸ್ಯೆಗಳಿಂದಾಗಿ ಸ್ಥಳೀಯ ಜನರಿಗೆ ಅನಾರೋಗ್ಯಗಳು ಕಾಡುತ್ತಿದೆ. ಸ್ಥಳೀಯ ಬಾವಿ ನೀರು ಕೂಡ ಕಲುಷಿತಗೊಂಡಿದೆ. ಈ ಬಗ್ಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುನೀರ್ ಕಾಟಿಪಳ್ಳ, ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ, ಶುದ್ದೀಕರಣ ಘಟಕಗಳು ಇಲ್ಲದ ಸಣ್ಣ ಕೈಗಾರಿಕೆಗಳಿಗಾಗಿ ಸಿದ್ದಪಡಿಸುತ್ತಿರುವ ಕೇಂದ್ರೀಕೃತ ತ್ಯಾಜ್ಯ ಶುದ್ದೀಕರಣ ಘಟಕದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು, ಶುದ್ದೀಕರಿಸದ ಕೈಗಾರಿಕಾ ತ್ಯಾಜ್ಯ ನೀರನ್ನು ಕಳ್ಳ ದಾರಿಯಲ್ಲಿ ಪಲ್ಗುಣಿಗೆ ಹರಿಸುತ್ತಿರುವ ಕೈಗಾರಿಕಾ ಘಟಕಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೈಗಾರಿಕಾ ವಲಯ, ಹಾರ್ಬರ್, ಎಮ್ ಸಿ ಎಫ್ ಮುಂತಾದ ಬೃಹತ್ ಉದ್ಯಮಗಳ ಬೇಜವಾಬ್ದಾರಿ ನಡೆಗಳಿಂದ ಸ್ಥಳೀಯರು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತದ ಮೌನ ಮುಂದುವರಿದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು. ಅಲ್ಲದೇ ನಗರ ಪಾಲಿಕೆಯ ವಿವಿಧೆಡೆಗಳಿಂದ ತೆರೆದ ಚರಂಡಿ ನೀರನ್ನು ನೇರವಾಗಿ ನದಿಗೆ ಬಿಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ಉಪಸ್ಥಿತರಿದ್ದರು.
ಹೋರಾಟದ ನೇತೃತ್ವವನ್ನು ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಮುಖಂಡರಾದ ನವೀನ್ ಕೊಂಚಾಡಿ, ತಯ್ಯೂಬ್ ಬೆಂಗ್ರೆ, ಕೂಳೂರು ಮಸೀದಿ ಅದ್ಯಕ್ಷರಾದ ಅಬ್ಬಾಸ್ ಪಂಜಿಮೊಗರು, ಪ್ರಮೀಳಾ ಕೆ, ಪಲ್ಗುಣಿ ನದಿ ಉಳಿಸಿ ಹೋರಾಟ ಸಮಿತಿಯ ಕನಕದಾಸ್ ಕೂಳೂರು, ಡೆಲ್ಸನ್, ಅನಿಲ್ ಅತ್ರೆಬೈಲ್, ಅನಿಲ್ ರಾಯಿಕಟ್ಟೆ ಲತಾ, ರೇಷ್ಮ, ರೀಮಾ, ಖಲೀಲ್ ಪಂಜಿಮೊಗರು, ಜಾನ್ ಮೇಲುಕೊಪ್ಪಲು, ಜುನೈದ್, ಮುಸ್ತಾಫ ಪಂಜಿಮೊಗರು, ಅನಿಲ್ ಡಿ ಸೋಜ, ಬಶೀರ್, ನೌಷಾದ್ ಬಾವು, ಶ್ರೀನಾಥ್ ಕುಲಾಲ್ ಮತ್ತಿತರರು ವಹಿಸಿದ್ದರು ಚರಣ್ ಶೆಟ್ಟಿ ಸ್ವಾಗತಿಸಿ ಸಂತೋಷ್ ಡಿಸೋಜ ವಂದಿಸಿದರು.



