ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ದೀನದಯಾಳ್ ಉಪಾಧ್ಯಾಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಹಾಸ್ಟೆಲ್ ನಲ್ಲಿ ಸರಿಯಾಗಿ ನೀರು ಬರುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು. ಅದರಲ್ಲೂ ಇಂದು ಮಧ್ಯಾಹ್ನದಿಂದಲೂ ನೀರು ಬರದೇ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ವಾಸರೂಮ್‌ಗೆ ನೀರಿಲ್ಲದೆ ತೀವು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಊಟದ ಬಗ್ಗೆಯೂ ಅಸಮಾಧಾನ: ಕೇವಲ ನೀರಿನ ಸಮಸ್ಯೆ ಮಾತ್ರವಲ್ಲ, ಹಾಸ್ಟೆಲ್‌ನಲ್ಲಿ ಮೆನು ಪ್ರಕಾರ ಊಟ ಕೊಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ವಾರಗಟ್ಟಲೆ ಟೊಮ್ಯಾಟೊ ಸಾಂಬಾರ್ ಕೊಡುತ್ತಾರೆ, ವಾರ್ಡನ್ ಸರಿಯಾಗಿ ಬಾಳೆಹಣ್ಣು ಕೊಡುವುದಿಲ್ಲ ಮತ್ತು ಹೊಟ್ಟೆ ತುಂಬ ಊಟವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಾಸ್ಟೆಲ್‌ನಲ್ಲಿ ಕೊಡುವ ಊಟದಲ್ಲಿ ಹುಳುಗಳು ಬರುತ್ತಿವೆ ಎಂದೂ ದೂರಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆ: ವಿದ್ಯಾರ್ಥಿನಿಯರು ನೀರು, ಊಟ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೊದಲೆಲ್ಲ ಸಮರ್ಪಕ ನೀರು ಇರುತ್ತಿತ್ತು. ಬೆಳಿಗ್ಗೆ, ಮಧ್ಯಾನ್ಹ ಮತ್ತು ಸಾಯಂಕಾಲವು ನೀರು ಇರುವುದಿಲ್ಲ. ಇದರಿಂದಾಗಿ ವಾಶರೂಮ್’ಗೆ ಹೋಗಲು ಸಹ ನೀರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿ ನೀರು ಕೂಡ ಸಿಗುವುದಿಲ್ಲ. ಹೊಟ್ಟೆ ತುಂಬ ಮೇನು ರೀತಿಯಲ್ಲಿ ಊಟವನ್ನು ಕೂಡ ನೀಡುವುದಿಲ್ಲ. ನಿಕೃಷ್ಣ ಗುಣಮಟ್ಟದ ಚಪಾತಿ ನೀಡುತ್ತಾರೆ. ಹೆಚ್ಚಿಗೆ ತರಕಾರಿಯನ್ನು ಕೂಡ ನೀಡುವುದಿಲ್ಲ. ಇದನ್ನ ಪ್ರಶ್ನಿಸಿದರೇ, ಇಷ್ಟೇ ರೇಷನ್ ನೀಡಿದ್ದಾರೆ. ನಾವೇನು ಮಾಡುವುದು ಎಂದು ಸಬೂಬು ಹೇಳುತ್ತಾರೆ ಎಂದು ದೂರಿದರು.
ಇನ್ನು ಕೆಲ ಜನರು ಬೆಳಿಗ್ಗೆ ಶಾಲೆಗೆ ಹೋದರೇ, ಮಧ್ಯಾನ್ಹ ಬಂದು ಊಟ ಮಾಡಲು ಮುಂದಾದರೇ, ಎಲ್ಲವೂ ಮುಗಿದು ಹೋಗಿರುತ್ತದೆ. ವಾಶರೂಂ ಪರಿಸ್ಥಿತಿಯಂತೂ ಹೇಳತೀರದಾಗಿದೆ. ವಾಶರೂಂಗಳ ಬಾಗಿಲುಗಳಿಗೆ ಚಿಲಕವೇ ಇಲ್ಲವಂತೆ. ನೀರು ಸರಬರಾಜು ಕೂಡ ಇಲ್ಲ. ಟ್ಯಾಂಕರ್ ನೀರು ತರಿಸಲಾಗುತ್ತಿದೆ. ಒಂದು ವಾರದಲ್ಲಿ ಒಮ್ಮೆಯೇ ಬಟ್ಟೆ ಒಗೆಯಬೇಕೆಂದು ಹೇಳಬೇಕೆನ್ನುತ್ತಿದ್ದಾರೆ ಎಂದರು. ಸ್ವಚ್ಛತೆಯ ಅಭಾವದಿಂದ ಕೀಟಗಳಾಗಿವೆ. ನೀರಿನ ಟ್ಯಾಂಕರ್’ಗಳನ್ನು ಸ್ವಚ್ಚ ಮಾಡುತ್ತಿಲ್ಲ. ಸ್ನಾನ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಹಾಸ್ಟೇಲ್ ಮೇಲ್ವಿಚಾರಕಿ ಅವರನ್ನು ಸ್ಥಳಕ್ಕೆ ಕರೆದಾಗ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಬೇರೆಡೆ ಕಟ್ಟಡಕ್ಕೆ ಹೋಗಬೇಕಾಗಿದೆ ಎಂಬ ಉತ್ತರವನ್ನು ನೀಡಿದ್ದಾರೆ.