ಮೈಸೂರು: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಕೃಷಿಕರ ಆತ್ಮಹತ್ಯೆ ತಡೆಗಟ್ಟಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 18ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ರಾಜ್ಯದ ಜನರು ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ, ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಬಹಳ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು. ವಿಧಾನಸೌಧದಲ್ಲಿ ಪಕ್ಷದ ಆಡಳಿತ ಹಾಗೂ ಅಧಿಕಾರಸ್ಥರ ಮುಖಗಳು ಬದಲಾಗಿವೆ. ಆದರೆ, ಜನರ ಆಶೋತ್ತರಗಳು ಈಡೇರಿಲ್ಲ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡಲು ಹೋರಾಟದ ಹಾದಿ ಹಿಡಿದಿದ್ದೇವೆ’ ಎಂದು ಹೇಳಿದರು.
ಈ ಸರ್ಕಾರ ವರ್ಷದ ಅವಧಿಯಲ್ಲೇ, ಪರಿಶಿಷ್ಟ ವರ್ಗದವರಿಗೆ ಮೀಸಲಿಟ್ಟಿದ್ದ ಅನುದಾನವನ್ನು ದುರುಪಯೋಗ ಮಾಡಿಕೊಂಡ ಆರೋಪಕ್ಕೆ ಒಳಗಾಗಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ . ಭೂಮಾಫಿಯಾದ ಅಕ್ರಮ ನಿರಂತರವಾಗಿ ನಡೆಯುತ್ತಲೇ ಇದೆ’ ಎಂದು ದೂರಿದರು.
ತಮಿಳುನಾಡಿಗೆ ಜುಲೈ 31ರವರೆಗೆ ನಿತ್ಯ ಒಂದು ಟಿಎಂಸಿ ಅಡಿ (11,500 ಕ್ಯುಸೆಕ್) ಕಾವೇರಿ ನೀರನ್ನು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಖಂಡನೀಯ. ನಮ್ಮಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಕೆಆರ್‌ಎಸ್ ಜಲಾಶಯ ಇನ್ನೂ ಭರ್ತಿಯೇ ಆಗಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಈ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಸುವ ನಿಟ್ಟಿನಲ್ಲಿ ಸರ್ವಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಕಾವೇರಿಯನ್ನು ಉಳಿಸುತ್ತೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಗೆ ಮುನ್ನ ಭರವಸೆ ನೀಡಿದ್ದರು. ಅವರು ಸೇರಿದಂತೆ ಕೇಂದ್ರದಲ್ಲಿ ಮಂತ್ರಿಗಳಾಗಿರುವ ರಾಜ್ಯದವರು ಬದ್ಧತೆಯನ್ನು ಪ್ರದರ್ಶಿಸುವ ಸಂದರ್ಭ ಈಗ ಬಂದಿದೆ. ರಾಜ್ಯದ ರೈತರ ಹಿತ ಕಾಪಾಡಲು ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಬೇಕು’ ಎಂದು ಒತ್ತಾಯಿಸಿದರು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಗಣಿ ಪ್ರದೇಶದಲ್ಲಿ ‘ಪರೀಕ್ಷಾರ್ಥ ಸ್ಫೋಟ’ವನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಆ ಬಗ್ಗೆ ನಾವು ಹಿಂದಿನಿಂದಲೂ ಹೋರಾಡುತ್ತಿದ್ದೇವೆ. ಸ್ಫೋಟವನ್ನು ಮುಂದೂಡಿರುವುದು ಜನ ಚಳವಳಿಗೆ ದೊರೆತ ಜಯವಾಗಿದೆ’ ಎಂದರು.
‘ಮುಡಾ ಹಗರಣದಿಂದಾಗಿ ಮೈಸೂರಿನ ಘನತೆಗೆ ಚ್ಯುತಿ ಬಂದಿದೆ. ಸರ್ಕಾರದಿಂದ ನಿಷ್ಪಕ್ಷಪಾತವಾದ ತನಿಖೆ ಆಗಬೇಕು. ಯಾರೇ ತಪ್ಪು ಮಾಡಿದ್ದರೂ ಅದೆಲ್ಲವೂ ಹೊರಬರಬೇಕು ಹಾಗೂ ಅಂಥವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಮುಡಾಕ್ಕೆ ಕಾಯಕಲ್ಪ ನೀಡಿ, ರೈತ ಹಾಗೂ ಜನಸ್ನೇಹಿ ಆಗಿಸಬೇಕು’ ಎಂದು ಒತ್ತಾಯಿಸಿದರು.
ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್. ಗೌಡ, ರೈತ ಸಂಘದ ಪದಾಧಿಕಾರಿಗಳಾದ ಹೊಸೂರು ಕುಮಾರ್, ನೇತ್ರಾವತಿ, ಹೊಸಕೋಟೆ ಬಸವರಾಜ್, ನಾಗರಾಜ್, ವಿಜಯೇಂದ್ರ ಪಾಲ್ಗೊಂಡಿದ್ದರು.