ರಾಮನಗರ: ವಿಕಲಚೇತನರಿಗೆ ದೊರಕುವ ಸೌಲಭ್ಯಗಳನ್ನು ತಲುಪಿಸಲು ಅಧಿಕಾರಿಗಳು ಕ್ರಮ ವಹಿಸುವಂತೆ ರಾಮನಗರ ನಗರಸಭೆ ಅಧ್ಯಕ್ಷರಾದ ವಿಜಯಕುಮಾರಿ ಅವರು ತಿಳಿಸಿದರು.
ಅವರು ಡಿ. ೩ರ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ವಿಕಲಚೇತನರಿಗಾಗಿ ಜಾರಿಗೆ ತಂದಿರುವ ಸೌಲಭ್ಯಗಳು ಹಾಗೂ ಅನುಕೂಲತೆಗಳು ಶೀಘ್ರಗತಿಯಲ್ಲಿ ಅವರಿಗೆ ದೊರಕುವಂತಾಗಬೇಕು. ಸೌಲಭ್ಯಗಳು ಅವರಿಗೆ ತಲುಪುವಲ್ಲಿ ಏನಾದರೂ ತೊಂದರೆಯಾದರೆ ವಿಶೇಷ ಗಮನ ಹರಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು. ರಾಮನಗರ ಉಪ ವಿಭಾಗಾಧಿಕಾರಿ ಬಿನೋಯ್ ಅವರು ಮಾತನಾಡಿ, ವಿಕಲಚೇತನರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸವಾಗಬೇಕು. ಸಮಾಜದಲ್ಲಿ ವಿಕಲಚೇತನರನ್ನು ಅಶಕ್ತರು ಎಂಬ ಕೀಳರಿಮೆಯಿಂದ ನೋಡಬಾರದು ಎಂದು ತಿಳಿಸಿದರು.
ವಿಕಲಚೇತನರು ವಿಕಲತೆಯನ್ನು ಮೆಟ್ಟಿ ನಿಂತು ತಮ್ಮಲ್ಲಿ ಹುದುಗಿರುವ ಕಲೆಯನ್ನು ಪ್ರೋತ್ಸಾಹಿಸಬೇಕು. ವಿಕಲಚೇತನರನ್ನು ಇತರ ರೀತಿಯಿಂದ ಶಕ್ತನಾಗಿರುವವನು ಎಂದು ಜಗತ್ತು ಗುರುತಿಸುತ್ತಿದೆ. ವಿಕಲಚೇತನರಿಗೆ ಅನುಕಂಪ ತೋರದೇ ಅವಕಾಶ ಕೊಡಬೇಕು. ಸಮಸ್ಯೆಗಳು ಎಷ್ಟೇ ಬಂದರೂ ಸಾಧಿಸಿ ತೋರಿಸಬೇಕು ಎಂದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ನಾಗವೇಣಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ವಿಶ್ವ ವಿಕಲಚೇತನರ ದಿನಾಚರಣೆಯನ್ನು ೧೯೯೨ ರಿಂದ ಅಚರಿಸಲಾಗುತ್ತಿದೆ. ೨೦೧೬ರಲ್ಲಿ ವಿಕಲಾಂಗಚೇತನರ ಅಧಿನಿಯಮ ಜಾರಿಗೆ ಬಂದಿತು. ಈ ಕಾಯ್ದೆಯಲ್ಲಿ ವಿಕಲಾಂಗ ಚೇತನರ ಹಕ್ಕುಗಳ ಮೇಲೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಹಾಗೂ ೨೧ ತರಹದ ವಿವಿಧ ನ್ಯೂನತೆಗಳನ್ನು ಸಹ ಅಂಗವಿಕಲತೆಯನ್ನು ಗುರುತಿಸಲಾಗಿದೆ. ಸರ್ಕಾರದಿಂದ ವಿಕಲಚೇತನರಿಗೆ ಜಾರಿ ಮಾಡಿರುವ ವಿವಿಧ ಸೌಲಭ್ಯಗಳು ದೊರಕುತ್ತವೆ ಎಂದರು
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅಧಿಕ ಅಂಕಗಳಿಸಿದ ವಿಕಲಚೇತನರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಗಡಿ ತಹಶೀಲ್ದಾರ್ ಸುರೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ಆರ್.ಸಿ.ಎಚ್ ಅಧಿಕಾರಿ ಡಾ. ರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಸುರೇಶ್, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳು, ವಿವಿಧ ವಿಕಲಚೇತನರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
