ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಅಂಗಡಿಯ ಮಾಲೀಕನನ್ನು ಬೆದರಿಸಿ ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದಂತೆ ಬಿಂಬಿಸಿ 1.6 ಲಕ್ಷರೂ. ದೋಚಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಅಂಗಡಿ ಮಾಲೀಕನನ್ನು ಬೆದರಿಸಿದ ಪಿಎಸ್ಐ ಮತ್ತು ಪೊಲೀಸ್ ಪೇದೆಗಳ ಮೇಲೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಜ್ಯೂಸ್ ಮತ್ತು ಜೆರಾಕ್ಸ್ ಅಂಗಡಿ ಮಾಲೀಕ ರಾಜೇಶ್ರನ್ನು ಕನಕಪುರದಿಂದ ಚನ್ನಪಟ್ಟಣ ಪೊಲೀಸ್ ಠಾಣೆಗೆ ಕರೆಸಿಕೊಂಡ ಪಿಎಸ್ಐ ಹರೀಶ್, ಆತನನ್ನು ಬೆದರಿಸಿದ್ದಲ್ಲದೆ ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದಂತೆ ಬಿಂಬಿಸಿ 1.6 ಲಕ್ಷರೂ.ಗಳನ್ನು ವಸೂಲಿ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಕ್ಟೋಬರ್ 29ರಂದು ಈ ಘಟನೆ ನಡೆದಿದ್ದು, ಹರೀಶ್ನೊಂದಿಗೆ ಪೊಲೀಸ್ ಪೇದೆಗಳಾದ ವರದರಾಜು, ಸುಭಾಶ್ ಹಾಗೂ ಮತ್ತಿಬ್ಬರು ಸಿಬ್ಬಂದಿಯೂ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆಂದು ಆರೊಪಿಸಲಾಗಿದೆ.
ಚನ್ನಪಟ್ಟಣದ ಎರಡು ಪೆಟ್ರೋಲ್ ಬಂಕ್‌ಗಳಲ್ಲಿ ಸ್ಕ್ಯಾನ್ ಮಾಡಿ 60,000 ರೂ. ಮತ್ತು ಒಂದು ಲಕ್ಷ ರೂ ನಗದು ವಸೂಲಿ ಮಾಡಿದ್ದ ಹರೀಶ್ ಮತ್ತು ಆತನ ಸಂಗಡಿಗರು, FIR ದಾಖಲಿಸದೇ ರಾಜೇಶ್‌ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈ ಘಟನೆಯ ಹಿನ್ನೆಲೆ, ರಾಜೇಶ್ ಕೇಂದ್ರ ವಲಯ IGP ಗೆ ದೂರು ಸಲ್ಲಿಸಿದ್ದರು. ಸಧ್ಯ PSI ಹರೀಶ್ ಮತ್ತು ನಾಲ್ಕೂ ಸಿಬ್ಬಂದಿ ವರ್ಗಾವಣೆಗೊಂಡು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೆನ್ ಠಾಣೆಯ DYSP ಕೆಂಚೇಗೌಡ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.



