Thursday, January 29, 2026
Google search engine

Homeಅಪರಾಧಕಾನೂನುಪಿಎಸ್‌ಐ ಹಗರಣ: ಆರ್.ಡಿ.ಪಾಟೀಲ್ ಮೈಸೂರು ಜೈಲಿಗೆ ಸ್ಥಳಾಂತರ

ಪಿಎಸ್‌ಐ ಹಗರಣ: ಆರ್.ಡಿ.ಪಾಟೀಲ್ ಮೈಸೂರು ಜೈಲಿಗೆ ಸ್ಥಳಾಂತರ

ಮೈಸೂರು : ಪಿಎಸ್‌ಐ ನೇಮಕಾತಿ ಹಗರಣದ ಮಾಸ್ಟರ್ ಮೈಂಡ್ ಆರ್.ಡಿ.ಪಾಟೀಲ್‌ನನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿದೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ಸರಣಿ ಅಶಿಸ್ತು ಮತ್ತು ವಿವಾದಗಳನ್ನು ಸೃಷ್ಟಿಸುತ್ತಿದ್ದ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.

ಕಳೆದ ತಿಂಗಳು ಕಲಬುರಗಿ ಜೈಲಿನಲ್ಲಿ ಕೈದಿಗಳು ಜೂಜಾಟವಾಡುತ್ತಿರುವ ಮತ್ತು ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ಮಟ್ಟದ ಚರ್ಚೆ ಗ್ರಾಸವಾಗಿತ್ತು. ಈ ಎಲ್ಲ ಕೃತ್ಯಗಳ ಹಿಂದೆ ಆರ್.ಡಿ.ಪಾಟೀಲ್ ಕುಮ್ಮಕ್ಕಿದೆ ಎಂಬುದು ತನಿಖೆಯಲ್ಲಿ ದೃಢಪಟ್ಟಿತ್ತು. ಅಷ್ಟೇ ಅಲ್ಲದೆ, ಜೈಲಿನ ವಾತಾವರಣವನ್ನು ಕೆಡಿಸುತ್ತಿದ್ದ ಆರೋಪ ಆತನ ಮೇಲಿತ್ತು.

ಕಲಬುರಗಿ ಜೈಲಿನ ಮುಖ್ಯ ಅಧೀಕ್ಷಕಿಯ ವಿರುದ್ಧವೇ ಲಂಚದ ಆರೋಪ ಮಾಡಿದ್ದ ಆರ್.ಡಿ.ಪಾಟೀಲ್, ಬಳಿಕ ಪೆನ್‌ಡ್ರೈವ್ ಮೂಲಕ ಅಕ್ರಮಗಳ ವಿಡಿಯೋ ವೈರಲ್ ಮಾಡಿಸಿ ಇಲಾಖೆಗೆ ಮುಜುಗರ ತಂದಿದ್ದ. ಈ ಬೆಳವಣಿಗೆಗಳ ಬೆನ್ನಲ್ಲೇ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಖುದ್ದು ಕಲಬುರಗಿ ಜೈಲಿಗೆ ಭೇಟಿ ನೀಡಿ ಸವಿಸ್ತಾರ ತನಿಖೆಗೆ ಆದೇಶಿಸಿದ್ದರು.

ಆರ್.ಡಿ.ಪಾಟೀಲ್ ಜೈಲಿನಲ್ಲಿ ತನ್ನ ಪ್ರಭಾವ ಬಳಸಿ ಗುಂಪುಗಾರಿಕೆ ಮಾಡುತ್ತಿದ್ದರಿಂದ ಜೈಲಿನ ಭದ್ರತೆ ಮತ್ತು ಶಿಸ್ತಿಗೆ ಧಕ್ಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಇತರೆ ಸಹಚರರಿಂದ ದೂರವಿಡಲು ಮತ್ತು ತನಿಖೆಗೆ ಸಹಕರಿಸುವಂತೆ ಮಾಡಲು ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಇಲಾಖೆ ನಿರ್ಧರಿಸಿದೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಆತನನ್ನು ಮೈಸೂರಿಗೆ ಕರೆತರಲಾಗಿದೆ.

RELATED ARTICLES
- Advertisment -
Google search engine

Most Popular