ಬೆಂಗಳೂರು: ಆಟವಾಡುತ್ತಿದ್ದ 5 ವರ್ಷದ ಮಗುವನ್ನು ಕಾಲಿನಿಂದ ಒದ್ದು ವ್ಯಕ್ತಿಯೊಬ್ಬ ವಿಕೃತಿ ಮೆರೆದಿರುವ ಘಟನೆ ತ್ಯಾಗರಾಜ ನಗರದ ಪೋಸ್ಟ್ ಆಫೀಸ್ ರಸ್ತೆಯಲ್ಲಿ ನಡೆದಿದೆ.
ದೀಪಿಕಾ ಜೈನ್ ಎಂಬವರು ತನ್ನ ಐದು ವರ್ಷದ ಮಗುವಿನ ಜೊತೆಗೆ ಸಹೋದರನ ಮನೆಗೆ ಹೋಗಿದ್ದರು. ಮಗುವನ್ನು ಮನೆ ಮುಂದಿನ ರಸ್ತೆಯಲ್ಲಿ ಆಟವಾಡೋದಕ್ಕೆ ಬಿಟ್ಟಿದ್ದರು. ಈ ವೇಳೆ ಹಿಂದಿನಿಂದ ನಡೆದುಕೊಂಡ ಬಂದ ಪಕ್ಕದ ಮನೆ ನಿವಾಸಿ ರಂಜನ್ ಎಂಬಾತ ಮಗುವಿಗೆ ಹಿಂದಿನಿಂದ ಜೋರಾಗಿ ಒದ್ದು ಮುಂದೆ ಹೋಗಿದ್ದ. ಒದ್ದ ಏಟಿಗೆ ಮಗು ಸುಮಾರು ದೂರಕ್ಕೆ ಮುಗ್ಗರಸಿ ಬಿದ್ದಿತ್ತು. ಬಿದ್ದ ರಭಸಕ್ಕೆ ಮಗುವಿನ ಹಣೆ, ಕಣ್ಣಿನ ಭಾಗ, ಕೈ-ಕಾಲುಗಳಲ್ಲಿ ರಕ್ತ ಬರ್ತಿತ್ತು.
ಮಗು ಮೇಲೆ ಹಲ್ಲೆ ಪ್ರಕರಣ ಸಂಬಂಧ ಪೋಷಕರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದೇ ರಸ್ತೆಯ ಸಿಸಿಟಿವಿ ಚೆಕ್ ಮಾಡಿದ್ದು, ಈ ವೇಳೆ ಸೈಕೋ ರಂಜನ್ ಮಕ್ಕಳ ಮೇಲೆ ನಡೆಸಿರೋ ವಿಕೃತಿಯ ಸಾಲು ಸಾಲು ಘಟನೆಗಳು ಬೆಳಕಿಗೆ ಬಂದಿವೆ.
ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ತಲೆಗೂದಲು ಹಿಡಿದು ಗರಗರನೇ ತಿರುಗಿಸಿ ಹಲ್ಲೆ ನಡೆಸಿದ್ದ. ಹೀಗೆ ಒಂದು ವಾರದ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ. ವಿಪರ್ಯಾಸ ಅಂದರೆ ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ ಯಾವುದೇ ಮಕ್ಕಳ ಪೋಷಕರು, ಯಾವುದೇ ದೂರು ನೀಡಿರಲಿಲ್ಲ.



