Monday, September 1, 2025
Google search engine

Homeರಾಜ್ಯಸುದ್ದಿಜಾಲಕರಿಕೆ ಗ್ರಾಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ

ಕರಿಕೆ ಗ್ರಾಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ

  • ನೂರಾರು ಜನರು ಪಾಲ್ಗೊಂಡು 50 ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆ

ಮಡಿಕೇರಿ : ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯ ಕರಿಕೆ ಗ್ರಾಮದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ನೂರಾರು ಜನರು ಪಾಲ್ಗೊಂಡು 50 ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾದವು.

ಕರಿಕೆ ಗ್ರಾಮದ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಲ್ಲಿನ ಸ್ಥಳೀಯರು ಸಾಲಾಗಿ ನಿಂತು ಭೂಮಿ ದುರಸ್ತಿ, ಆರ್‍ಟಿಸಿ ಸರಿಪಡಿಸುವುದು, ರಸ್ತೆ ನಿರ್ಮಾಣ ಮಾಡುವುದು, ಬಸ್ ಸೌಕರ್ಯ ಕಲ್ಪಿಸುವುದು, ವಿದ್ಯುತ್ ಪರಿವರ್ತಕ ನಿರ್ಮಾಣ ಹಾಗೂ ವಿದ್ಯುತ್ ಮಾರ್ಗ ಸರಿಪಡಿಸುವುದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಮತ್ತಷ್ಟು ಮೂಲ ಸೌಲಭ್ಯ ಕಲ್ಪಿಸಿ ಹೆಚ್ಚಿನ ವಿದ್ಯಾರ್ಥಿಗಳ ಸೇರ್ಪಡೆಗೆ ಶ್ರಮಿಸುವುದು, ಜೊತೆಗೆ ಶಿಕ್ಷಕರನ್ನು ನಿಯೋಜಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸ್ಥಳೀಯರು ಬೆಳಕು ಚೆಲ್ಲಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಾಲ್ಲೂಕು ಹಾಗೂ ಹೋಬಳಿ ಕೇಂದ್ರದಿಂದ ತುಂಬಾ ದೂರದಲ್ಲಿರುವ ಕರಿಕೆ ಗ್ರಾಮಸ್ಥರ ಅಹವಾಲು ಆಲಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯ ನಡುವೆಯೂ ಸಹ ಇರುವವರು ಕೆಲಸ ಮಾಡಬೇಕು. ಭೂಮಿ ದುರಸ್ತಿ ಸಂಬಂಧ 25 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಭೂಮಿ ದುರಸ್ತಿ ಮಾಡುವುದು, ಆರ್‍ಟಿಸಿ ಸರಿಪಡಿಸುವುದು ಸೇರಿದಂತೆ ಅರಣ್ಯ, ಕಂದಾಯ ಇಲಾಖೆಗೆ ಸಂಬಂಧ ಸಮಸ್ಯೆ ಬಗೆಹರಿದಲ್ಲಿ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ನಿರ್ದೇಶನ ನೀಡಿದರು.

ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಣ ಮಾಡುವಲ್ಲಿ ಅರಣ್ಯ ಇಲಾಖೆ ಮುಂದಾಗಬೇಕು. ಆ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ವನ್ಯಪ್ರಾಣಿಗಳ ಚಟುವಟಿಕೆ ಬಗ್ಗೆ ಜನರಿಗೆ ಮಾಹಿತಿ ನೀಡಿ, ಜನರ ಆತಂಕ ಕಡಿಮೆ ಮಾಡಬೇಕು. ಸಾರ್ವಜನಿಕರ ಜತೆ ನಿರಂತರ ಸಂಪರ್ಕ ಇದ್ದಲ್ಲಿ ಸಮಸ್ಯೆಗಳು ತಾವಾಗಿಯೇ ಬಗೆ ಹರಿಯಲಿವೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು.

ಕರಿಕೆ ಗ್ರಾಮದ ಜನರು ಭೂಮಿ ದುರಸ್ತಿ, ಆರ್‍ಟಿಸಿ ಸರಿಪಡಿಸುವುದು ಸೇರಿದಂತೆ ಕೃಷಿ, ಜಾತಿ, ಆದಾಯ ಮತ್ತಿತರ ಸರ್ಕಾರದ ಸೌಲಭ್ಯ ಪಡೆಯಲು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಸತಾಯಿಸದೆ ನೀಡಬೇಕು. ಹತ್ತ್ತಾರು ಕಿ.ಮೀ. ದೂರದಿಂದ ಬರುವ ಗ್ರಾಮಸ್ಥರಿಗೆ ನಾಳೆ ಬನ್ನಿ ಎಂದು ಹೇಳಲು ಮನಸ್ಸು ಹೇಗೆ ಬರುತ್ತದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಸಿಟ್ಟಾದರು.

ಜನಸಂಪರ್ಕ ಸಭೆಯಲ್ಲಿ ಸಲ್ಲಿಕೆಯಾದ ಅಹವಾಲುಗಳನ್ನು ಬಗೆಹರಿಸಿ ಪರಿಹಾರ ಕುರಿತು ತ್ವರಿತವಾಗಿ ವರದಿ ನೀಡುವಂತೆ ತಹಶೀಲ್ದಾರ್ ಹಾಗೂ ತಾ.ಪಂ.ಇಒಗೆ ಸೂಚಿಸಿದರು.

ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದವರಿಗೆ ತಲುಪಬೇಕು. ಇವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಿದ್ದು, ಭೂಮಿ, ರಸ್ತೆ, ಕುಡಿಯುವ ನೀರು, ಅರಣ್ಯ, ಶಾಲಾ ಶಿಕ್ಷಣ ಹೀಗೆ ವಿವಿಧ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದು ಶೀಘ್ರ ಬಗೆಹರಿಸುವಂತೆ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು.

ಬಡವರಿಗೆ ಬಿಪಿಎಲ್ ಕಾರ್ಡ್ ಕಲ್ಪಿಸುವ ಸಂಬಂಧ ಸರ್ಕಾರದ ಹಂತದಲ್ಲಿ ಗಮನಸೆಳೆಯಲಾಗುವುದು, ಈ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು. ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ ಕಲ್ಪಿಸುವುದು, ವಿದ್ಯುತ್ ಪರಿವರ್ತಕಗಳ ನಿರ್ಮಾಣ ಸೇರಿದಂತೆ ಹಲವು ಅಹವಾಲುಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಾರ್ವಜನಿಕರ ಅಹವಾಲು ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕರೆದು ಕೂಡಲೇ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಎ.ಎಸ್.ಪೊನ್ನಣ್ಣ ಅವರು ನಿರ್ದೇಶನ ನೀಡಿದರು.

ಕರಿಕೆ ಗ್ರಾ.ಪಂ.ಅಧ್ಯಕ್ಷರಾದ ಬಾಲಚಂದ್ರ ನಾಯರ್, ಉಪಾಧ್ಯಕ್ಷರಾದ ಕಲ್ಪನಾ ಜಗದೀಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನೆರವಂಡ ಉಮೇಶ್, ಸ್ಥಳೀಯರಾದ ರಮಾನಾಥ್ ಬೇಕಲ್, ಹರೀಶ್, ತಹಶೀಲ್ದಾರ್ ಶ್ರೀಧರ, ತಾ.ಪಂ.ಇಒ ಶೇಖರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಕರಿಕೆ ಗ್ರಾ.ಪಂ.ವ್ಯಾಪ್ತಿಯಲ್ಲಿ 20 ಕೋಟಿಗೂ ಹೆಚ್ಚು ವಿವಿಧ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ: ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕರಿಕೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 20 ಕೋಟಿ ರೂ. ಗೂ ಹೆಚ್ಚು ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಸೋಮವಾರ ಉದ್ಘಾಟಿಸಿದರು.

ಕರಿಕೆ ಗ್ರಾಮದ ಪಚ್ಚೆಪಿಲಾವುನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಆಶ್ರಮ ಆದಿವಾಸಿ ಬುಡಕಟ್ಟು ಶಾಲೆ ಕಟ್ಟಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸರ್ಕಾರ ಬುಡಕಟ್ಟು ಆದಿವಾಸಿ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಆ ನಿಟ್ಟಿನಲ್ಲಿ ಕುಗ್ರಾಮಗಳಲ್ಲೂ ಸಹ ವಸತಿ ಶಾಲೆಗಳನ್ನು ಆರಂಭಿಸಿ ಒಳ್ಳೆಯ ಶಿಕ್ಷಣ ನೀಡಲು ಮುಂದಾಗಿದೆ ಎಂದು ಹೇಳಿದರು.

ಸರ್ಕಾರ ಎಲ್ಲಾ ವರ್ಗದ ಜನರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಳ್ಳುವಂತಾಗಬೇಕು. ಆದಿವಾಸಿ ವಿದ್ಯಾರ್ಥಿಗಳು ಸಹ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಯ ಸದುಪಯೋಗ ಪಡೆದು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎಂದು ತಿಳಿಸಿದರು.

ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಅವುಗಳನ್ನು ಬಳಸಿಕೊಂಡು ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಸರ್ಕಾರ 4 ಕೋಟಿ ರೂ. ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ನಿರ್ಮಾಣ ಮಾಡಿದೆ. ಇಲ್ಲಿನ ಸುತ್ತಮುತ್ತಲಿನ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕರು ಹೇಳಿದರು. ಗ್ರಾ.ಪಂ.ಅಧ್ಯಕ್ಷರಾದ ಬಾಲಚಂದ್ರನ್ ನಾಯರ್, ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿ ಎಸ್.ಹೊನ್ನೇಗೌಡ, ತಾಲ್ಲೂಕು ಅಧಿಕಾರಿ ಬಾಲಕೃಷ್ಣ ರೈ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಇತರರು ಇದ್ದರು.

ಬಳಿಕ ಚೆತ್ತುಕಾಯ ಅರಣ್ಯ ಪ್ರವಾಸಿ ಮಂದಿರ ಬಳಿ 15 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು. ಹಾಗೆಯೇ ಕರಿಬಳಪು ಪರಿಶಿಷ್ಟ ಜಾತಿ ಕಾಲೋನಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಉದ್ದೇಶದ ಸ್ಥಳ ವೀಕ್ಷಿಸಿದರು. ನಂತರ ಪೊಂಗಾರು ರಸ್ತೆಯಲ್ಲಿ 85 ಲಕ್ಷ ರೂ. ವೆಚ್ಚದ ಹೊಸ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಹಾಗೆಯೇ ಆರ್ತುಕುಟ್ಟಿ ರಸ್ತೆಯಲ್ಲಿ 70 ಲಕ್ಷ ರೂ. ವೆಚ್ಚದ ಕಿಂಡಿ ಅಣೆಕಟ್ಟು ಸೇತುವೆ ಉದ್ಘಾಟಿಸಿದರು.

ಬಳಿಕ ಕರಿಕೆ ಗ್ರಾ.ಪಂ.ವ್ಯಾಪ್ತಿಯ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮಡೆಕಾನ ರಸ್ತೆ ಉದ್ಘಾಟಿಸಿದರು. ನಂತರ ಚೆತ್ತುಕಾಯವರೆಗೆ 2 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗಿರುವ ಹೊಸ ವಿದ್ಯುತ್ ಕಂಬ ಮಾರ್ಗ ಮತ್ತು 5 ಹೊಸ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದ್ದು, ಇದನ್ನು ಸಾರ್ವಜನಿಕರಿಗೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕರಿಕೆ-ಭಾಗಮಂಡಲ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರ ಅಹವಾಲು ಆಲಿಸಿದರು.

RELATED ARTICLES
- Advertisment -
Google search engine

Most Popular