ರಾಮನಗರ: ಭಾರತವು ಪೋಲಿಯೋ ಮುಕ್ತ ದೇಶವಾಗಿದೆ. ಆದರೆ ಕೆಲವು ದೇಶಗಳಲ್ಲಿ ಪೋಲಿಯೋ ಇನ್ನೂ ಭೀತಿಯನ್ನು ಉಂಟು ಮಾಡುತ್ತಿದ್ದು ನಮ್ಮ ದೇಶದಲ್ಲೂ ಮರುಕಳಿಸುವ ಸಾಧ್ಯತೆ ಇರುವುದರಿಂದ ಪ್ರತಿ ಬಾರಿಯೂ ೨ ಹನಿ ಪೋಲಿಯೋ ಹನಿ ಹಾಕಿಸಿ ನಿಮ್ಮ ಮಗುವಿನ ಸಂಪೂರ್ಣ ರಕ್ಷಣೆಯನ್ನು ಪೋಷಕರು ಖಚಿತಪಡಿಸಿಕೊಳ್ಳಬೇಕೆಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ರಾಜು ಅವರು ತಿಳಿಸಿದರು.
ಅವರು ಫೆ. ೨೯ರಂದು ಜಿಲ್ಲಾಡಳಿತ ಜಿಲ್ಲಾಪಂಚಾಯತ್, ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ, ಲಯನ್ಸ್ ಸಂಸ್ಥೆ, ರಾಮನಗರ ಸಿಲ್ಕ್ ಸಿಟಿ ಹಾಗೂ ವಿವಿಧ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಜಾಗೃತಿ ಜಾಥಾವನ್ನು ರಾಮನಗರ ಟೌನ್ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಂಡಿದ್ದು ಪೋಷಕರು ಮತ್ತು ಸಾರ್ವಜನಿಕರು ಜಾಗೃತರಾಗಿ ಶಾಶ್ವತ ಅಂಗವಿಕಲತೆಯನ್ನು ತರಬಲ್ಲ ಪೋಲಿಯೋವನ್ನು ಲಸಿಕೆಯ ಮೂಲಕ ಪ್ರತಿರೋಧಿಸೋಣ ಜೊತೆಗೆ ಪೋಲಿಯೋ ಮುಕ್ತ ಸಮಾಜ ನಿರ್ಮಿಸಲು ಸಹಕರಿಸುವಂತೆ ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮಾ ಅವರು ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಮಾರ್ಚ್-೦೩ ರಿಂದ ೦೬ ವರೆಗೆ ನಡೆಯುತ್ತಿದ್ದು ೦-೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕುವ ಮೂಲಕ ಪೋಲಿಯೋ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು ೪ ದಿನಗಳವರೆಗೆ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳು ಹಾಗೂ ಇತರೆ ಇಲಾಖೆಗಳು ಸಂಪೂರ್ಣ ಸಹಕಾರ ನೀಡುವಂತೆ ತಿಳಿಸಿದರು.
ಡಿ.ಎಂ.ಒ ಡಾ. ಶಶಿಧರ್, ಡಿ.ಟಿ.ಒ ಡಾ. ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್, ಡಾ. ಹರ್ಷಿತ್, ರೋಟರಿ ಸಂಸ್ಥೆಯ ಅಧ್ಯಕ್ಷ ಕಾಂತರಾಜು, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಇಶಾಂತ್, ಲಯನ್ ಸಂಸ್ಥೆ ರಾಮನಗರ ಸಿಲ್ಕ್ ಸಿಟಿ ನಿರ್ದೇಶಕರಾದ ಸುಧಾರಾಣಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ, ಆರೋಗ್ಯ ಮೇಲ್ವಿಚಾರಣಾಧಿಕಾರಿ ವಿನಯ್‌ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಾಸಪ್ಪ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಉಮಾದೇವಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.