Friday, December 12, 2025
Google search engine

Homeರಾಜ್ಯಸುದ್ದಿಜಾಲಸದನದಲ್ಲೂ ಪ್ರತಿಧ್ವನಿಸಿದ ಪುರುಷೋತ್ತಮ ಬಿಳಿಮಲೆ ಹೇಳಿಕೆ

ಸದನದಲ್ಲೂ ಪ್ರತಿಧ್ವನಿಸಿದ ಪುರುಷೋತ್ತಮ ಬಿಳಿಮಲೆ ಹೇಳಿಕೆ

ಬೆಳಗಾವಿ : ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳಾಗಿರುತ್ತಿದ್ದರು, ಅಲ್ಲಿ ಅಂಥ ಅನಿವಾರ್ಯತೆ ಇತ್ತು ಎಂದು ಹೇಳಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಹೇಳಿಕೆ ವಿಧಾನ ಸಭೆಯಲ್ಲೂ ಪ್ರತಿಧ್ವನಿಸಿದೆ. ಗಮನ ಸೆಳೆಯುವ ಸೂಚನೆ ವೇಳೆ ಈ ಬಗ್ಗೆ ಕಾರ್ಕಳ ಶಾಸಕ ಸುನಿಲ್​​ ಕುಮಾರ್​​ ಪ್ರಸ್ತಾಪಿಸಿದ್ದು, ಬಿಳಿಮಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ ನೋಟಿಸ್​​ ಕೊಟ್ಟು ಸ್ಪಷ್ಟನೆ ಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಈ ಹೇಳಿಕೆ ಕುರಿತು ಮತ್ತೊಂದೆಡೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ಪುರುಷೋತ್ತಮ ಬಿಳಿಮಲೆ ಅವರನ್ನು ವಜಾ ಮಾಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹ ವ್ಯಕ್ತಪಡಿಸಿದ್ದು, ಈ ವೇಳೆ ನೋಟಿಸ್ ಕೊಟ್ಟು ವಿವರಣೆ ಕೇಳುವಂತೆ ಸರ್ಕಾರಕ್ಕೆ ಸ್ಪೀಕರ್ ಯು.ಟಿ. ಖಾದರ್​​ ಸೂಚನೆ ನೀಡಿದ್ದಾರೆ. ಈ ಕುರಿತು ಮುಂದೆ ಯಾರೂ ಆಕ್ಷೇಪಾರ್ಹ ಹೇಳಿಕೆ ಕೊಡದಂತೆ ಕ್ರಮ ಕೈಗೊಳ್ಳುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ.

ಇನ್ನೂ ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸತ್ಯವನ್ನು ಹೇಳಲು ಹಿಂಜರಿಯಬಾರದು ಎಂದಿದ್ದಾರೆ. ಯಕ್ಷಗಾನ ಕಲಾವಿದರು ಮೇಳಕ್ಕೆಂದು 6-8 ತಿಂಗಳು ತಿರುಗಾಟದಲ್ಲೇ ಇರುವುದರಿಂದ ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಸಾಮಾನ್ಯವಾಗಿ ಅವರ ಮೇಲೆ ಇತರರಿಗೆ ಮೋಹವೇ ಇರುತ್ತಿತ್ತು. ಸ್ತ್ರೀವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ಆ ಮೂಲಕ ರಂಗಭೂಮಿ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗ್ತಿತ್ತು ಎಂದು ಹೇಳಿದ್ದರು.

ಈ ತಮ್ಮ ಹೇಳಿಕೆ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಆ ಬಗ್ಗೆ ಬಿಳಿಮಲೆ ಅವರು ಕ್ಷಮೆ ಕೇಳಿದ್ದು, ಜೊತೆಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ಕೆಲ ಯಕ್ಷಗಾನ ಕಲಾವಿದರು ಸಲಿಂಗಿಗಳು ಹೌದು. ಈ ವಿಚಾರವನ್ನು ನಾನು ಹೊಸದಾಗಿ ಹೇಳುತ್ತಿಲ್ಲ. ನನ್ನ ಉದ್ದೇಶ ಕಲಾವಿದರ ಬದುಕು ಉಜ್ವಲಗೊಳಿಸುವುದು. ಹೀಗಾಗಿ ನನ್ನ ಹೇಳಿಕೆಯಿಂದ ಕಲಾವಿದರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಯಕ್ಷಗಾನ ಕಲಾವಿದರು, ಅಭಿಮಾನಿಗಳಲ್ಲಿ ವಿಷಾದ ವ್ಯಕ್ತಪಡಿಸುವೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular