ಚಾಮರಾಜನಗರ : ಕನ್ನಡ ಚಿತ್ರರಂಗದ ನಿರ್ದೇಶಕ ಸ್ಥಾನಕ್ಕೆ ವಿಶ್ವಖ್ಯಾತಿ ತಂದು ಕೊಟ್ಟವರು ಪುಟ್ಟಣ್ಣ ಕಣಗಾಲ್.ಇವರ ಚಿಂತನೆ, ದೂರದೃಷ್ಟಿ, ಸೃಜನಶೀಲತೆ,ಹೊಸ ರೂಪದ ಯೋಚನೆ, ವಿಶ್ವ ಶ್ರೇಷ್ಠ ನಿರ್ದೇಶಕರನ್ನಾಗಿ ಮಾಡಿ ಕನ್ನಡಿಗರು ಹೆಮ್ಮೆಪಡುವಂತೆ ಮಾಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಕೊಡುಗೆಗಳು ಕುರಿತು ಮಾತನಾಡುತ್ತಾ ಪುಟ್ಟಣ್ಣ ಕಣಗಾಲ್ ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ಮಿಸಿ ವಿಶೇಷ ಶೈಲಿಯ ಮೂಲಕ ನಿರ್ದೇಶನ ನೀಡಿದವರು. ಇವರ ಚಿತ್ರಗಳಲ್ಲಿ ಕಲೆ,ಸಾಹಿತ್ಯ,ಭಾವನಾತ್ಮಕತೆ, ಮಾನವೀಯ ಸಂಬಂಧಗಳು, ಸಾಮಾಜಿಕ ಕಾಳಜಿ,ಆಳವಾದ ಮಹಿಳಾ ಪ್ರಾಧಾನ್ಯತೆ ಮುಂತಾದ ದೃಷ್ಟಿಕೋನದ ಮೂಲಕ ಕನ್ನಡ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗ ಶಾಶ್ವತವಾಗಿ ಉಳಿಯುವಂತೆ ಮಾಡಿದವರು. ಇವರ ಚಿತ್ರಗಳಾದ ಬೆಳ್ಳಿಮೋಡ, ಗೆಜ್ಜೆಪೂಜೆ, ನಾಗರಹಾವು, ಶರಪಂಜರ,ಶುಭ ಮಂಗಳ, ಸಾಕ್ಷಾತ್ಕಾರ, ಅಮೃತಘಳಿಗೆ, ಮಸಣದ ಹೂವು ಚಿತ್ರಗಳು ಕಣಗಾಲ್ ರವರನ್ನು ವಿಶ್ವಖ್ಯಾತಿ ತಂದುಕೊಟ್ಟವು. ಕನ್ನಡದಲ್ಲಿ 24 ಚಿತ್ರಗಳ ನಿರ್ದೇಶನ ಮಾಡಿ ಹಿಂದಿ ಮತ್ತು ಮಲಯಾಳಂ ಗಳಲ್ಲೂ ನಿರ್ದೇಶನ ಮಾಡಿ ಪ್ರಸಿದ್ಧರಾದವರು.
ಇವರ ಪ್ರತಿ ಚಿತ್ರದಲ್ಲೂ ಮಹಿಳಾ ಪ್ರಾಧಾನ್ಯತೆಗೆ ಹೆಚ್ಚು ಒತ್ತು ನೀಡಲಾಗಿದೆ.ಕನ್ನಡ ಚಿತ್ರರಂಗಕ್ಕೆ ಅಪಾರ ನಟರನ್ನು ನೀಡಿದ ಕೀರ್ತಿ ಪುಟ್ಟಣ್ಣ ಕಣಗಾಲ್ ರವರಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗದ ದಿಗ್ಗಜರಾದ ವಿಷ್ಣುವರ್ಧನ್, ಅಂಬರೀಷ್,ಶ್ರೀನಾಥ್, ರಾಮಕೃಷ್ಣ, ಶ್ರೀಧರ್, ಜೈ ಜಗದೀಶ್ ಹಾಗೂ ಕಲ್ಪನಾ,ಆರತಿ, ಪದ್ಮಾವಾಸಂತಿ, ಅಪರ್ಣ ಮುಂತಾದ ನಟರನ್ನು ಚಿತ್ರರಂಗದ ಮೂಲಕ ಕನ್ನಡ ಚಿತ್ರರಂಗಕ್ಕೆ ನೀಡಿದ ಶಿಲ್ಪಿ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ ಜನಿಸಿದ ಪುಟ್ಟಣ್ಣನವರ ಸ್ಮಾರಕವನ್ನು ನಿರ್ಮಿಸುವ ನಿರ್ಧಾರ ಕೈಗೊಂಡಿರುವ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಎಲ್ ಸುರೇಶ್ ಮಾತನಾಡಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಾಕ್ಷಾತ್ಕಾರ ಚಿತ್ರವನ್ನು ನಿರ್ಮಾಣ ಮಾಡಿದವರು ಕೃಷ್ಣ ಚಿತ್ರಮಂದಿರದ ಮಾಲೀಕರಾಗಿದ್ದ ಮಲ್ಲಿಕ್ ರವರು ಚಾಮರಾಜನಗರದವರು ಎಂಬುದು ಸಂತೋಷವಾದುದು.ಪುಟ್ಟಣ್ಣ ಕಣಗಾಲ್ ರವರನ್ನು ನಿರ್ದೇಶಕರ ಬ್ರಹ್ಮ ಎಂದು ಕರೆಯಲಾಗಿದೆ.ಅವರ ಪ್ರತಿ ಚಿತ್ರಗಳಲ್ಲೂ ಕಲಾವಿದರಿಂದ ಶ್ರೇಷ್ಠ ಮಟ್ಟದ ನಟನೆಯನ್ನು ಹೊರ ತರುವ ಮೂಲಕ ಶಾಶ್ವತವಾದ ನಟರನ್ನು ರೂಪಿಸಿದ ಕೀರ್ತಿ ಪುಟ್ಟಣ್ಣ ಕಣಗಾಲ್ ರವರಿಗೆ ಸಲ್ಲುತ್ತದೆ.
ಅವರ ರಂಗನಾಯಕಿ ಚಿತ್ರದಲ್ಲಿ ಅಪೂರ್ವವಾದ ಪಾತ್ರಗಳ ಸೃಷ್ಟಿಯ ಜೊತೆಗೆ ಮಸಣದ ಹೂವು,ಶರಪಂಜರ,ಎಡಕಲ್ಲು ಗುಡ್ಡದಮೇಲೆ ಚಿತ್ರಗಳು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿದಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ನೂರಾರು ಕಾರ್ಯಕ್ರಮಗಳನ್ನು ರೂಪಿಸಿ ಪ್ರತಿಯೊಬ್ಬ ಸಾಹಿತಿಗಳು ಕಲಾವಿದರು, ನಟರು, ರಾಷ್ಟ್ರಪುರುಷರು,ನಿರ್ದೇಶಕರು ಖಳನಟರು, ಕವಿಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯಾಗಿದೆ. ಅಧ್ಯಕ್ಷರಾದ ಋಗ್ವೇದಿ ಅವರಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿಕೆ ಆರಾಧ್ಯ ಪುಟ್ಟಣ್ಣ ಕಣಗಾಲ್ ರವರ ಜೀವನ ಪ್ರಶಸ್ತಿ ಗೌರವ ಹಾಗೂ ಅವರ ಸಾಧನೆಗಳ ಕುರಿತು ಪರಿಚಯ ಮಾಡಿಕೊಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಎಲ್ ಶಿವಲಿಂಗ ಮೂರ್ತಿ ರವರು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳ ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ಉಮೇಶ್,ರಾಜೇಶ್,ಹನುಮಂತ ನಾಯಕ, ಮಂಜುನಾಥ್, ವೆಂಕಟೇಶ್, ರಘು ಮುಂತಾದವರು ಉಪಸ್ಥಿತರಿದ್ದರು.



