ಬೆಂಗಳೂರು : ನಾಡಹಬ್ಬ ಮೈಸೂರು ದಸರಾ ಮುಗಿದು 5 ತಿಂಗಳಾದರೂ 30 ಕೋಟಿಯ ಲೆಕ್ಕವಿಲ್ಲ! ಸರ್ಕಾರ ಕೂಡಲೇ ಪಾರದರ್ಶಕವಾಗಿ ಪೂರ್ಣ ಲೆಕ್ಕವನ್ನು ಸಾರ್ವಜನಿಕರ ಮುಂದಿಡಬೇಕು ಮತ್ತು ಬಾಕಿ ಇರುವ ಕಲಾವಿದರ ಸಂಭಾವನೆಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಸರ್ಕಾರದ ವಿರುದ್ದ Xನಲ್ಲಿ ಪೋಸ್ಟ್ ಮಾಡಿರುವ ಅವರು, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಮುಗಿದು ಐದು ತಿಂಗಳು ಕಳೆದರೂ, ಅದಕ್ಕಾಗಿ ಖರ್ಚು ಮಾಡಿದ 30 ಕೋಟಿ ರೂಪಾಯಿಗಳ ಲೆಕ್ಕ ನೀಡಲು ಈ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ಇದರರ್ಥವೇನು?ಎಂದು ಪ್ರಶ್ನಿಸಿದ್ದಾರೆ.
ಒಂದೆಡೆ 2026ರ ದಸರಾ ಸಿದ್ಧತೆಗಳು ಆರಂಭವಾಗುತ್ತಿವೆ, ಆದರೆ 2025ರ ದಸರಾದ ಖರ್ಚು-ವೆಚ್ಚಗಳ ಬಗ್ಗೆ ಜಿಲ್ಲಾಡಳಿತದ ಬಳಿ ಸರಿಯಾದ ಉತ್ತರವಿಲ್ಲ. ಈ ವಿಳಂಬ, ಹಿಂಜರಿಕೆ ನೋಡಿದರೆ ಭ್ರಷ್ಟಾಚಾರದ ವಾಸನೆ ಕಂಡುಬರುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ,?ದಸರಾ ಹಬ್ಬದ ಲೆಕ್ಕ ಖರ್ಚು ವೆಚ್ಚದ ಲೆಕ್ಕ ಕೊಡಲು ಇಷ್ಟು ಹಿಂಜರಿಕೆ ಏಕೆ? ಈ ಹಿಂದೆ ದಸರಾ ಮುಗಿದ ಒಂದೆರಡು ತಿಂಗಳಲ್ಲಿ ಲೆಕ್ಕ ನೀಡಲಾಗುತ್ತಿತ್ತು. ಈಗ 5 ತಿಂಗಳಾದರೂ ಅಧಿಕಾರಿಗಳು ಇನ್ನೂ ಲೆಕ್ಕ ಹಾಕುತ್ತಿದ್ದೇವೆ ಎಂಬ ಕುಂಟು ನೆಪ ಹೇಳುತ್ತಿರುವುದು ಯಾರನ್ನು ರಕ್ಷಿಸಲು? ಐದು ಲಕ್ಷದ ಒಪ್ಪಂದ ಮಾಡಿಕೊಂಡು ಕೇವಲ 1.95 ಲಕ್ಷ ನೀಡಿ ಕಲಾವಿದರನ್ನು ಬೀದಿಗೆ ತಳ್ಳುತ್ತಿರುವುದು ಸರಿಯೇ? ಕಲಾವಿದರ ಶ್ರಮದ ಹಣದಲ್ಲಿ ಕಮಿಷನ್ ಆಟ ನಡೆಯುತ್ತಿದೆಯೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾರ್ವಜನಿಕ ಹಣಕ್ಕೆ ಹೊಣೆಗಾರಿಕೆ ಇಲ್ಲವೇ? ಜನರ ತೆರಿಗೆ ಹಣ 30 ಕೋಟಿ ರೂಪಾಯಿಗಳ ಲೆಕ್ಕವನ್ನು ಬಹಿರಂಗಪಡಿಸಲು ಸರ್ಕಾರಕ್ಕೆ ಯಾಕೆ ಭಯ? ಮೈಸೂರು ದಸರಾ ಕೇವಲ ಹಬ್ಬವಲ್ಲ, ಅದು ನಮ್ಮ ನಾಡಿನ ಸಾಂಸ್ಕೃತಿಕ ಹೆಮ್ಮೆ. ಅದನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಕಳೆದ ಅಕ್ಟೋಬರ್ ನಲ್ಲಿ ಸಕಾಲಕ್ಕೆ ವೇತನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರದ ಅಮಾನವೀಯ ವ್ಯವಸ್ಥೆಗೆ ಬೇಸತ್ತು ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ ಅವರುನೇಣಿಗೆ ಶರಣಾಗಿದ್ದರು.ಇಂತಹ ಹೃದಯವಿದ್ರಾವಕ ಘಟನೆ ನಡೆದ ಮೇಲೂ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಸರ್ಕಾರ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರಿವು ಕೇಂದ್ರಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಕಳೆದ 16 ತಿಂಗಳಿಂದ 5,884 ಗ್ರಂಥಪಾಲಕರಿಗೆ ಪೂರ್ಣ ವೇತನ ನೀಡದೆ ಅವರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ತಮ್ಮ ಪಾಪರ್ ಸರ್ಕಾರದ ದಿವಾಳಿತನಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು ಸ್ವಾಮಿ? ಈ ಕೊಡಲೇ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಬಾಕಿ ವೇತನ ಬಿಡುಗಡೆ ಮಾಡಿ. ಇನ್ನು ಮುಂದೆ ಸಕಾಲಕ್ಕೆ ಪೂರ್ತಿ ಸಂಬಳ ಸಿಗುವಂತೆ ಕ್ರಮ ಕೈಗೊಳ್ಳಿ ಎಂಧು ಅಶೋಕ್ ಆಗ್ರಹಿಸಿದ್ದಾರೆ.



