ಮಂಡ್ಯ: ಕೆಆರ್ಎಸ್ ಅಣೆಕಟ್ಟಿಗೆ ಟಿಪ್ಪು ಸುಲ್ತಾನ್ ಸಾಗರ ಎಂಬ ಹೆಸರನ್ನು ಇಡುವ ಹುನ್ನಾರ ನಡೆಯುತ್ತಿದ್ದು, ಇದರಿಂದ ಮೈಸೂರು ರಾಜವಂಶದ ತಾತ್ವಿಕ ಐತಿಹ್ಯಕ್ಕೆ ಮಸಿ ಬಳೆಯಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಮೈಸೂರು ರಾಜ ಮನೆತನಕ್ಕೆ ಕಳಂಕ ತರುವಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಮೈಸೂರು ರಾಜವಂಶದ ತಾತ್ವಿಕ ಐತಿಹ್ಯಕ್ಕೆ ಮಸಿ ಬಳೆಯಲಾಗುತ್ತಿದೆ ಎಂದು ಆರೋಪಿಸಿದರು.
ಅವರು ಮುಂದಾಗಿ, “ಟಿಪ್ಪು ಸುಲ್ತಾನ್ ಭಾರತೀಯರು ಅಲ್ಲ, ಪರ್ಷಿಯಾದವರಾಗಿದ್ದು, ನಾಡದ್ರೋಹಿಯೂ ಹೌದು. ಅವರು ಲಕ್ಷಾಂತರ ಹಿಂದೂಗಳ ಹತ್ಯೆಗೈದಿದ್ದಾರೆ. ಟಿಪ್ಪು ಸತ್ತ ನಂತರ 112 ವರ್ಷಗಳ ನಂತರವೇ ಅಣೆಕಟ್ಟು ನಿರ್ಮಾಣ ಆರಂಭವಾಯಿತು. ಶಿಲಾನ್ಯಾಸದ ಯಾವುದೇ ದಾಖಲೆ ಇಲ್ಲ. ಆಗ ಹಳೆಗನ್ನಡ ಬಳಸಲಾಗುತ್ತಿತ್ತು, ಆದರೆ ಈಗ ತೋರಿಸುತ್ತಿರುವ ಶಿಲಾನ್ಯಾಸ ಪ್ಲೇಟು ಹೊಸ ಕನ್ನಡದಲ್ಲಿ ಇದೆ,” ಎಂದು ಪ್ರಶ್ನಿಸಿದರು.
ಅಶೋಕ್ ವ್ಯಂಗ್ಯವಾಡುತ್ತಾ, “ಟಿಪ್ಪುವಿನ ಮೇಲೆ ಇಷ್ಟು ಪ್ರೀತಿ ಇದ್ದರೆ ಕಾಂಗ್ರೆಸ್ ತನ್ನ ಪಕ್ಷದ ಹೆಸರನ್ನೇ ಟಿಪ್ಪು ಸುಲ್ತಾನ್ ಕಾಂಗ್ರೆಸ್ ಪಕ್ಷ ಎಂದು ಬದಲಿಸಲಿ,” ಎಂದು ಹೇಳಿದರು. ಅವರು ಸಚಿವ ಹೆಚ್.ಸಿ. ಮಹದೇವಪ್ಪ ಅವರ ವಿರುದ್ಧವೂ ಕಿಡಿಕಾರುತ್ತಾ, “ಬೆಂಗಳೂರಿಗೆ ಬಂದು ಟಿಪ್ಪು ಶಿಲಾನ್ಯಾಸ ಹುಡುಕುವ ಬದಲು ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಬದಲಿಸಿ, ನಾಡಪ್ರಭು ಟಿಪ್ಪು ಸುಲ್ತಾನ್ ಎಂದು ಹೇಳ್ತೀರಾ?” ಎಂದು ವಾಗ್ದಾಳಿ ನಡೆಸಿದರು.
ಅಶೋಕ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 80 ಅಡಿಗಳಿಗಷ್ಟೇ ಅನುಮತಿ ಇದ್ದರೂ 124 ಅಡಿಗಳ ಅಣೆಕಟ್ಟು ಕಟ್ಟಿದ ಮಹಾನ್ ನಾಯಕ ಎಂದು ಹೇಳಿದ್ದಾರೆ. ಅವರು ಶುದ್ಧ ಮನಸ್ಸಿನಿಂದ ಹಣಕಾಸು ಬಿಕ್ಕಟ್ಟಿನ ನಡುವೆಯೂ ಅರಮನೆಯ ಒಡವೆಗಳನ್ನು ಮಾರಾಟ ಮಾಡಿ ಕೆಆರ್ಎಸ್ ಪೂರ್ಣಗೊಳಿಸಿದರು. ಆದರೆ ಸಿದ್ದರಾಮಯ್ಯ ಸರ್ಕಾರವು ಎರಡು ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ಈ ಹಿನ್ನಲೆಯಲ್ಲಿ ಅವರ ಮಗನನ್ನು ನಾಲ್ವಡಿಗೆ ಹೋಲಿಸುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಿದ್ದರಾಮಯ್ಯ ಅವರನ್ನು ಹೋಲಿಸಬೇಕಾದರೆ ನೆಹರು, ಇಂದಿರಾ ಅಥವಾ ರಾಹುಲ್ ಗಾಂಧಿಗೆ ಹೋಲಿಸಲಿ,” ಎಂದು ಅವರು ಟೀಕಿಸಿ ಸಮಾಪನಗೊಳಿಸಿದರು.