ಮೈಸೂರು : ಬಹು ವರ್ಷಗಳಿಂದ ಭಾರೀ ಚರ್ಚೆಯಲ್ಲಿದ್ದ ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆಯ ಬಗ್ಗೆ ಇಲಾಖೆ ಅಂತಿಮ ತಿರ್ಮಾನಕ್ಕೆ ಬಂದಿದೆ. ಇದೀಗ ಈ ಯೋಜನೆಯನ್ನು ಕೈಬಿಡಲಾಗಿದೆ. ರೈಲ್ವೆ ಅಧಿಕಾರಿಗಳು ಈ ರೈಲು ಮಾರ್ಗವು ಸುಮಾರು 87.2 ಕಿ.ಮೀ ಉದ್ದದ ಪ್ರಸ್ತಾವಿತ ರೈಲು ಕಾರಿಡಾರ್, ಆರ್ಥಿಕ ಮತ್ತು ಕಾರ್ಯಾಚರಣೆಯ ಮಾನದಂಡಗಳನ್ನು ಪೂರೈಸುವುದಿಲ್ಲ ಹೇಳಿದೆ. ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಧರ್ಮರಾಜ್ ಕಲಗೊಂಡ ಅವರು ಹೇಳಿರುವ ಪ್ರಕಾರ, ಆರ್ಥಿಕ ಆದಾಯ ವಿಚಾರಗಳು ಹಾಗೂ ಈ ಯೋಜನೆಗೆ ಆಗುವ ವೆಚ್ಚದ ಬಗ್ಗೆಯೂ ನೋಡಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ರೈಲ್ವೆ ಮಾರ್ಗವೂ ಪ್ರಯಾಣಿಕರನ್ನು ಹಾಗೂ ಸರಕುಗಳನ್ನು ಸಾಗಾಣೆ ಮಾಡುವ ಸಾಮಾರ್ಥ್ಯವನ್ನು ಹೊಂದಿಲ್ಲ. ಇದಕ್ಕಾಗಿ ಹೆಚ್ಚಿನ ಅನುದಾನವನ್ನು ನೀಡಬೇಕಾಗುತ್ತದೆ, ಇದು ದೀರ್ಘಾವಧಿಯ ಆರ್ಥಿಕ ಲಾಭವನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.
ಈ ರೈಲು ಮಾರ್ಗ ಮೈಸೂರಿನಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸಲು ಯೋಜನೆಯನ್ನು ಹಾಕಲಾಗಿತ್ತು. ಈ ರೈಲು ಮಾರ್ಗಕ್ಕೆ ಸುಮಾರು 1,379 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆರಂಭಿಕ ಅಂದಾಜಿನ ಪ್ರಕಾರ, ಈ ಯೋಜನೆಯ ವೆಚ್ಚ ಸುಮಾರು 1,800 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ಇದು ಹೆಚ್ಚಾಗುತ್ತ ಹೋಯಿತು. ಈ ಯೋಜನೆಗೆ 2018–19ರ ಆರ್ಥಿಕ ವರ್ಷದಲ್ಲಿ ಅನುಮೋದನೆ ಸಿಕ್ಕಿತ್ತು. ಅಂತಿಮ ಸ್ಥಳ ಸಮೀಕ್ಷೆ (FLS) ಟೆಂಡರ್ ಅನ್ನು ಜೂನ್ 2022 ರಲ್ಲಿ ನೀಡಲಾಯಿತು. ಆದರೆ ರೈಲ್ವೆ ಅಧಿಕಾರಿಗಳು ಈಗ ಮಾರ್ಗದ ವೆಚ್ಚ ಹಾಗೂ ಮುಂದಿನ ದಿನಗಳಲ್ಲಿ ಎಷ್ಟು ಆದಾಯಗಳು ಬರುಬಹುದು ಎಂದು ಸಮೀಕ್ಷೆಯನ್ನು ನಡೆಸಬೇಕು ಎಂದು ಹೇಳಿದ್ದರು. ನಂತರ ಈ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ರೈಲ್ವೆ ಮಾರ್ಗ ನಿರ್ಮಾಣ ರದ್ದಾಗಲು ಪ್ರಮುಖ ಕಾರಣಗಳು:
ಕಡಿಮೆ ಬೇಡಿಕೆ : ಒಂದು ನಿರ್ದಿಷ್ಟ ಮಾರ್ಗದಲ್ಲಿ ಪ್ರಯಾಣಿಸುವವರ ಸಂಖ್ಯೆ ಅಥವಾ ಅಲ್ಲಿಂದ ಸಾಗಣೆಯಾಗುವ ಸರಕುಗಳ ಪ್ರಮಾಣ ಕಡಿಮೆ ಇದ್ದಾಗ, ಅಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡುವುದು ಆರ್ಥಿಕವಾಗಿ ನಷ್ಟದಾಯಕವಾಗುತ್ತದೆ. ಇದೀಗ ಈ ರೈಲ್ವೆ ಮಾರ್ಗದಲ್ಲೂ ಕೂಡ ಇದೆ ಪರಿಸ್ಥಿತಿ.
ಹೂಡಿಕೆಯ ಮೇಲಿನ ಲಾಭ : ಬೃಹತ್ ಯೋಜನೆಗಳಿಗೆ ಬ್ಯಾಂಕ್‌ಗಳಿಂದ ಅಥವಾ ವಿದೇಶಿ ಸಂಸ್ಥೆಗಳಿಂದ ಸಾಲ ಪಡೆಯಲಾಗುತ್ತದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ಆ ಸಾಲವನ್ನು ಮರುಪಾವತಿಸಲು ಕಷ್ಟವಾಗುತ್ತದೆ. ಮೈಸೂರು-ಕುಶಾಲನಗರ ರೈಲು ಮಾರ್ಗ ಹೆಚ್ಚಿನ ಅನುದಾನ ನೀಡಬೇಕಾದರೆ, ಈ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಪರ್ಯಾಯ ಮಾರ್ಗಗಳು: ಈಗಾಗಲೇ ಉತ್ತಮ ರಸ್ತೆ ಅಥವಾ ರೈಲ್ವೆ ಸಂಪರ್ಕವಿದ್ದು, ಹೊಸ ಯೋಜನೆಯಿಂದ ಹೆಚ್ಚಿನ ಬದಲಾವಣೆ ಸಾಧ್ಯವಿಲ್ಲ
ಯೋಜನೆಯ ರದ್ದತಿ ಅಥವಾ ವಿಳಂಬ: ಇತ್ತೀಚೆಗೆ ಕೇರಳದ ‘ಸಿಲ್ವರ್ ಲೈನ್’ ರೈಲ್ವೆ ಯೋಜನೆಯ ವಿಷಯದಲ್ಲೂ ಇಂತಹದ್ದೇ ಚರ್ಚೆಗಳು ನಡೆದಿದ್ದವು. ವೆಚ್ಚಕ್ಕೆ ಹೋಲಿಸಿದರೆ ಅದರಿಂದ ಸಿಗುವ ಆರ್ಥಿಕ ಲಾಭ ಕಡಿಮೆ ಎಂಬ ಕಾರಣಕ್ಕೆ ಅನೇಕ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದರು.



