ಬೆಂಗಳೂರು : ರಾಜ್ಯದ ಅನೇಕ ಕಡೆ ಕೆಲ ದಿನಗಳಿಂದ ಬೆಂಬಿಡದೆ ಮಳೆಯಾಗುತ್ತಿದ್ದು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಅದರಲ್ಲೂ ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಇದೀಗ ಮುಂದಿನ 24 ಗಂಟೆಗಳವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಕಡಿಮೆಯಾಗಲಿದ್ದು, ಬೆಂಗಳೂರಿನ ಸುತ್ತಾಮುತ್ತಾ ಮಳೆಯಾಗಲಿದ್ದು, ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ.
ಇನ್ನು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು (ನಗರ, ಗ್ರಾಮಾಂತರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಹಾಸನ, ಕೊಡಗು, ತುಮಕೂರು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೂಡ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಇನ್ನು ಮಹಾರಾಷ್ಟ್ರದಲ್ಲಿ ಮಳೆಯ ಭಾರೀ ಮಳೆಯಾಗುತ್ತಿರುವ ಕಾರಣ ಬೆಳಗಾವಿ ತತ್ತರಿಸಿದೆ. ಚಿಕ್ಕೋಡಿ ಭಾಗದಲ್ಲಿ ಜಲಾಶಯಗಳು ತುಂಬಿ ಹರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಸೇತುವೆಗಳು ಮುಳುಗಡೆಯಾಗಿವೆ.
ಈಗಾಗಲೇ ಕೃಷ್ಣ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇತ್ತ ಬೆಳಗಾವಿಯಲ್ಲಿ ಕೂಡ ಭಾರೀ ಮಳೆಯುತ್ತಿರುವ ಹಿನ್ನಲೆ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶವು ಸಂಪೂರ್ಣ ಜಲಾವೃತವಾಗಿದೆ.
ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಪರಿಣಾಮ ಜಿಲ್ಲೆಯ ದೇವದುರ್ಗ ಮಾರ್ಗವಾಗಿ ಕಲಬುರಗಿಗೆ ಸಂಪರ್ಕ ಕಲ್ಪಿಸುವ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದೇವದುರ್ಗ ತಾಲೂಕು ಆಡಳಿತವು ಬುಧವಾರ ಸಂಜೆಯಿಂದಲೇ ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಿದೆ.
ಇತ್ತ ಘಟಪ್ರಭಾ ನದಿ ಕೂಡ ತನ್ನ ರೌದ್ರರೂಪ ತೋರಿಸಿದ್ದು, ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ನದಿಯು ತನ್ನ ಪಾತ್ರ ಬಿಟ್ಟು 2 ಕಿ.ಮೀ ದೂರಕ್ಕೆ ಹರಿಯುವ ಮೂಲಕ ರೈತರ ಬೆಳೆಗಳು ಸಂಪೂರ್ಣ ನಾಶವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.