ಬೆಂಗಳೂರು: ಈ ಬೇಸಿಗೆಯಲ್ಲಿ ತಾಪಮಾನ ಏರಿಕೆಯಿಂದ ಕೆಂಗೆಟ್ಟಿದ್ದ ರಾಜ್ಯದ ಜನರಿಗೆ ವರುಣದೇವ ಕೊನೆಗೂ ಕರುಣೆ ತೋರಿದ್ದಾನೆ. ಹಲವು ಜಿಲ್ಲೆಗಳಲ್ಲಿ ದಿಡೀರನೇ ವಾತಾವರಣ ಬದಲಾಗಿದ್ದು ಮೋಡ ಕವಿದ ವಾತಾವರಣದೊಂದಿಗೆ ಭಾರಿ ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಾತ್ರವಲ್ಲದೆ, ಬಯಲು ಸೀಮೆಯ ಜಿಲ್ಲೆಗಳಲ್ಲೂ ಮಳೆಯ ಸಿಂಚನವಾಗುತ್ತಿದ್ದು, ವಾತಾವರಣದಲ್ಲಿನ ಉಷ್ಣಾಂಶ ಗಣನೀಯವಾಗಿ ಕುಸಿದಿದೆ.
ಹೀಗಾಗಿ ಹವಾಮಾನ ಇಲಾಖೆಯ ಮುನ್ಸೂಚನೆಯ ನೀಡಿರುವಂತ, ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಮಳೆಯ ಪ್ರಮಾಣ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ಮಳೆ ಸುರಿಯಲಿದೆ. ಅದರಲ್ಲೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಅನಿರೀಕ್ಷಿತವಾಗಿ ಆಲಿಕಲ್ಲು ಮಳೆ ಬೀಳುವ ಸಾಧ್ಯತೆ ಇರುವುದರಿಂದ ರೈತರು ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಮೇ ತಿಂಗಳ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಅತಿ ಹೆಚ್ಚು ಸಕ್ರಿಯವಾಗಲಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ಬಾರಿಯ ಅಕಾಲಿಕ ಮಳೆ ಜಲಮೂಲಗಳ ಮರುಪೂರಣಕ್ಕೆ ಸಹಕಾರಿಯಾಗಲಿದ್ದರೂ, ಬೆಳೆ ಕಟಾವಿನ ಹಂತದಲ್ಲಿರುವ ರೈತರಿಗೆ ಆಲಿಕಲ್ಲು ಮಳೆ ಮತ್ತು ಗಾಳಿಯು ಹೆಚ್ಚಿನ ನಷ್ಟ ಉಂಟುಮಾಡುವ ಆತಂಕವನ್ನು ಹೆಚ್ಚಿಸಿದೆ. ಆದ್ದರಿಂದ ಮೇ ತಿಂಗಳ ದ್ವಿತೀಯಾರ್ಧ ಹವಾಮಾನದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಲಿದೆ.



