ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ
ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ಬೇಜವಾಬ್ದಾರಿ ಪಾಲಿಕೆ ಆಡಳಿತದಲ್ಲಿ ಹೊಂದಾಣಿಕೆ ಇಲ್ಲದೆ ಸಂಪೂರ್ಣ ಹಾಳಾಗುತ್ತಿದೆ ಎಂದು ರಾಜಕುಮಾರ ಟೋಪಣ್ಣವರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ ನಗರದಲ್ಲಿ ಸಿಐಟಿಐಐಎಸ್ 2.0 ಯೋಜನೆ ಜಾರಿಗೆ ಬಂದರೆ ತ್ಯಾಜ್ಯ ನಿರ್ವಹಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗಲಿದೆ. ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಮರುಬಳಕೆ, ಕಾಂಪೋಸ್ಟ್ ಉತ್ಪಾದನೆ, ಸ್ವಚ್ಛತೆ ಸುಧಾರಣೆ ಹಾಗೂ ಹಸಿರು ಉದ್ಯೋಗಗಳ ಸೃಷ್ಟಿಗೆ ಈ ಯೋಜನೆ ಸಹಕಾರಿಯಾಗಲಿದೆ. ಪರಿಸರ ಸಂರಕ್ಷಣೆ, ಆರೋಗ್ಯ ಭದ್ರತೆ ಮತ್ತು ನಗರ ಸೌಂದರ್ಯ ವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದೆ. ಆದರೆ ಯೋಜನೆ ಯಶಸ್ವಿಯಾಗಲು ನಗರ ಪಾಲಿಕೆ ತನ್ನ ಪಾಲಿನ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಟೆಂಡರ್ ಪ್ರಕ್ರಿಯೆಯನ್ನು ವೇಗಗೊಳಿಸಬೇಕಿತ್ತು ಎಂದರು.
ಕರ್ನಾಟಕದ ಆರು ಸ್ಮಾರ್ಟ್ ಸಿಟಿಗಳ ಪೈಕಿ ಬೆಳಗಾವಿ ನಗರಕ್ಕೆ ಮಾತ್ರ ಕೇಂದ್ರ ಸರಕಾರ ಆಯ್ಕೆ ಮಾಡಿತ್ತು. ಸಿಐಟಿಐಐಎಸ್ 2.O ಈ ಯೋಜನೆಯಲ್ಲಿ ಕಸ ಘನ ತಾಜ್ಯವಿಲೇವಾರಿಯಲ್ಲಿ ಹೊಸ ವ್ಯವಸ್ಥೆ ಮಾಡಿ ಬೆಳಗಾವಿ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯ. ಆದರೆ ಮಹಾನಗರ ಪಾಲಿಕೆಯ ಕೌನ್ಸಿಲ್ ದುರಾಡಳಿತದಿಂದ ಬಂದಿರುವ ಯೋಜನೆ ಕೈತಪ್ಪುವ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಪಾದಿಸಿದರು.
ಸಿಐಟಿಐಐಎಸ್ 2.O 138 ಕೋಟಿ ರೂ. ಯೋಜನೆ ಇದೆ. ಇದಕ್ಕೆ ಬೆಳಗಾವಿ ನಗರ ಆಯ್ಕೆಯಾಗಿದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ತಲಾ 40% ಹಾಗೂ ಬೆಳಗಾವಿ ಪಾಲಿಕೆ 20% ಕೊಡಬೇಕು. ಈಗಾಲೇ ಪಾಲಿಕೆಯಿಂದಲೂ 20% ಕೊಡುವುದಾಗಿ ಠರಾವ್ ಪಾಸ್ ಮಾಡಲಾಗಿದೆ. ರಾಜ್ಯ ಸರಕಾರ ಕೊಡಬೇಕಿದ್ದ 40% ಅನುದಾನ ಈಗಾಗಲೆ ಪಾಲಿಕೆಗೆ ಕೊಟ್ಟಿರುಗ ಅನುದಾನ ಬಳಕೆ ಮಾಡಿಕೊಳ್ಳಬೇಕೆಂದು ಸೂಚಿಸಿದೆ. ಹಾಗಾಗಿ 131 ಕೋಟಿ ರೂ. ಪೈಕಿ 81 ಕೋಟಿ ರೂ ಪಾಲಿಕೆ ಅನುದಾನ ಕೊಡದಿದ್ದರೆ ಯೋಜನೆ ವಾಪಸ್ಸ ಹೋಗುತ್ತದೆ. ಹಣ ಹೊಂದಾಣಿಕೆ ಮಾಡಿ ಯೋಜನೆ ಪ್ರಾರಂಭಿಸುವುದು ಪಾಲಿಕೆ ಕೌನ್ಸಿಲ್ ಜವಾಬ್ದಾರಿ. ಆದರೆ 65 ಕೋಟಿ ತೆರಿಗೆ ಸಂಗ್ರಹ ಮಾಡಿ 60 ಕೋಟಿ ರೂ. ಖರ್ಚು ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ 81 ಕೋಟಿ ರೂ. ಪಾಲಿಕೆ ಕೌನ್ಸಿಲ್ ಹೊಂದಾಣಿಕೆ ಮಾಡುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಬರುತ್ತದೆಯೋ ಅಥವಾ ಮರಳಿ ಹೊಗುತ್ತದೆಯೋ ಇದನ್ನು ಯಾವ ರೀತಿ ಪಾಲಿಕೆ ಕೌನ್ಸಿಲ್ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು.
ಪಾಲಿಕೆಗೆ ಬರಬೇಕಾದ ಆದಾಯ ಸುಧಾರಣೆ ಮಾಡಿಲ್ಲ. ಕಳೆದ ಮಾ.2022 ರಿಂದ ಪಾಲಿಕೆಯ ಆದಾಯದಲ್ಲಿ ಕಡಿಮೆಯಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 1 ಲಕ್ಷ 58 ಸಾವಿರ ಆಸ್ತಿಗಳಿವೆ. ಅದರಲ್ಲಿ 70%ರಷ್ಟು ಜನ ತೆರಿಗೆ ಕಟ್ಟುತ್ತಾರೆ. 30% ರಷ್ಟು ಜನ ತೆರಿಗೆ ಕಟ್ಟುತ್ತಿಲ್ಲ ಎಂದು ದೂರಿದ್ದಾರೆ.
ಮೊದಲು ತೆರಿಗೆ ತುಂಬದವರಿಗೆ ಅಂದಿನ ಆಡಳಿತ ಪಕ್ಷ ಹಾಗೂ ಆಯುಕ್ತರು ಬೀದಿಗೆ ಇಳಿದು ತೆರಿಗೆ ಸಂಗ್ರಹ ಮಾಡುತ್ತಿದ್ದರು. ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದಲೂ ತೆರಿಗೆ ಸಂಗ್ರಹಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನಗರದಲ್ಲಿರುವ ಪಾಲಿಕೆಯ ವಾಣಿಜ್ಯ ಮಳಿಗೆಗಳ ಅವಧಿ ಕಳೆದ ಮಾ.22ಕ್ಕೆ ಮುಗಿದಿವೆ. ಹೊಸ ಆಕ್ಸನ್ ಮಾಡಿಲ್ಲ. ಇದ್ದ ವಾಣಿಜ್ಯ ಮಳಿಗೆ ಹಾಗೆ ನಡೆದಿವೆ. ಇದರಿಂದ ಪಾಲಿಕೆಗೆ ಲಕ್ಷಾಂತರ ರೂ. ತೆರಿಗೆ ವಂಚನೆಯಾಗುತ್ತಿದೆ. ಒಂದು ಕಡೆ ಪಾಲಿಕೆಯ ಆದಾಯ ಹೆಚ್ಚಾಗಿಲ್ಲ. ಪಾಲಿಕೆಯಲ್ಲಿ ಸದಸ್ಯರ ಅನಾವಶ್ಯಕ ಖರ್ಚು, ವೆಚ್ಚ ಹೆಚ್ಚಾಗಿವೆ ಎಂದು ಆರೋಪಿಸಿದ್ದಾರೆ.
ಇಷ್ಟೊಂದು ದೊಡ್ಡ ಯೋಜನೆಯನ್ನು ಕೈತಪ್ಪಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದರು. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹಾಗೂ ಸ್ಥಳೀಯ ಬಿಜೆಪಿ ನಾಯಕರು ಯಾವ ಕ್ರಮ ಕೈಗೊಂಡಿದ್ದಾರೆ ಎನ್ನುವುದನ್ನು ಜನರಿಗೆ ತಿಳಿಸಬೇಕು ಎಂದಿದ್ದಾರೆ.
ಪಾಲಿಕೆ ಕೌನ್ಸಿಲ್ ನಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಕಟ್ಟುನಿಟ್ಟಿನ ಹೋರಾಟ ಮಾಡುತ್ತಿಲ್ಲ. ಇ ಆಸ್ತಿ ವಿಚಾರದಲ್ಲಿ ಎಲ್ಲರೂ ಸೇರಿಕೊಂಡು ಸಾರ್ವಜನಿಕರು ಹಾಗೂ ಪಾಲಿಕೆಯನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಮಾತನಾಡಿ, ಕಳೆದ 2023ರಿಂದ 26ರ ವರೆಗೆ ಪಾಲಿಕೆಯಿಂದ ಎಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಎನ್ನುವುದನ್ನು ಸದಸ್ಯರು ಸ್ಪಷ್ಟಪಡಿಸಬೇಕು ಎಂದರು.



