Friday, July 3, 2026
Google search engine

Homeದೇಶರಾಮ ಮಂದಿರ ದೇಣಿಗೆ ಪ್ರಕರಣ : ಮೌನ ಮುರಿದ ಆರ್‌ಎಸ್‌ಎಸ್‌

ರಾಮ ಮಂದಿರ ದೇಣಿಗೆ ಪ್ರಕರಣ : ಮೌನ ಮುರಿದ ಆರ್‌ಎಸ್‌ಎಸ್‌

ನವದೆಹಲಿ : ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರ್ಬಳಕೆ ಪ್ರಕರಣದ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್‌, ತನಿಖೆಯಲ್ಲಿ ತಪ್ಪಿತಸ್ಥರು ಪತ್ತೆಯಾದರೆ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ. ಈ ಸಂಬಂಧ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿಕೆ ನೀಡಿದ್ದಾರೆ.

ದೇಣಿಗೆಗಳಿಂದ ಹಣ ಕಳುವಾಗಿರುವ ಘಟನೆಯು ಕೋಟ್ಯಂತರ ರಾಮಭಕ್ತರ ಶ್ರದ್ಧೆ ಹಾಗೂ ನಂಬಿಕೆಗೆ ನೋವಾಗಿದೆ. ಈ ಘಟನೆಯಿಂದ ನಾವೆಲ್ಲರೂ ತೀವ್ರವಾಗಿ ನೊಂದಿದ್ದೇವೆ ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ. ಪ್ರಕರಣದ ಕುರಿತು ರೂಪಿಸಲಾಗಿರುವ ವಿಶೇಷ ತನಿಖಾ ತಂಡ (SIT) ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಕರಣದ ಸುತ್ತಮುತ್ತ ಉಂಟಾಗಿರುವ ಗೊಂದಲ ಮತ್ತು ಅನಿಶ್ಚಿತತೆಗೆ ಶೀಘ್ರ ಅಂತ್ಯ ಹಾಡಬೇಕಿದ್ದು, ದೇವಸ್ಥಾನದ ಹಣಕಾಸು ನಿರ್ವಹಣೆ ಹಾಗೂ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ದೋಷರಹಿತವಾಗಿಸಬೇಕು. ಇದರಿಂದ ಭಕ್ತರ ವಿಶ್ವಾಸ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಈ ಘಟನೆಯನ್ನು ನೆಪ ಮಾಡಿಕೊಂಡು ಹಿಂದೂ ಸಮಾಜ ಮತ್ತು ಧರ್ಮವನ್ನು ಗುರಿಯಾಗಿಸಲು ಕೆಲವು ಹಿಂದೂ ವಿರೋಧಿ ಹಾಗೂ ದೇಶ ವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ಅವರು, ಸಮಾಜ ಸಂಯಮ ಮತ್ತು ತಾಳ್ಮೆಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ್ದು, ಇದುವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಎಸ್‌ಐಟಿ ತನಿಖೆ ತೀವ್ರಗೊಂಡಿದೆ.

RELATED ARTICLES
- Advertisment -
Google search engine

Most Popular