Monday, May 19, 2025
Google search engine

Homeಸ್ಥಳೀಯರಾಮಾನುಜನ್ ಗಣಿತ ಜಗತ್ತಿನ ಅಗಣಿತ ಸಾಧಕ : ಸಾಹಿತಿ ಬನ್ನೂರು ರಾಜು

ರಾಮಾನುಜನ್ ಗಣಿತ ಜಗತ್ತಿನ ಅಗಣಿತ ಸಾಧಕ : ಸಾಹಿತಿ ಬನ್ನೂರು ರಾಜು

ಮೈಸೂರು: ನಮ್ಮಲ್ಲಿ ಅನೇಕ ಮಂದಿ ಬದುಕಿದ್ದೂ ಸತ್ತಂತಿರುತ್ತಾರೆ.ಮತ್ತೆ ಕೆಲವರು ತಮ್ಮ ಸಮಾಜೋಪಯೋಗಿ ಕೆಲಸಗಳಿಂದ ಸತ್ತಿದ್ದೂ ಬದುಕಿರುತ್ತಾರೆ. ಇನ್ನು ಕೆಲವರು ಬಹಳ ಅಪರೂಪ ಎನ್ನುವಂತೆ ತಮ್ಮ ಅದ್ಭುತ ಸಾಧನೆಯಿಂದ ಸಾವಿನ ನಂತರವೂ ಜಗತ್ತು ಇರುವ ತನಕವೂ ಶಾಶ್ವತವಾಗಿ ಬದುಕಿರುತ್ತಾರೆ. ಅಂಥವರಲ್ಲಿ ಮೊದಲ ಸಾಲಿನಲ್ಲೇ ಇರುವವರು ಜಗದ್ವಿಖ್ಯಾತ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಎಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಡಿ.ಬನುಮಯ್ಯ ಬಾಲಕರ ಪ್ರೌಢ ಶಾಲೆ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಪ್ರೌಢ ಶಾಲೆಯ ಆವರಣದಲ್ಲಿ ಜಗದ್ವಿಖ್ಯಾತ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶ್ರೀನಿವಾಸ ರಾಮಾನುಜನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವಿಶ್ವ ಉದಯವಾದ ಕಾಲದಿಂದಲೂ ಅದರೊಟ್ಟಿಗೆ ಗಣಿತವೂ ಆರಂಭವಾಗಿ ಸಾಗಿ ಬಂದಿದೆ. ಪ್ರತಿಯೊಂದಕ್ಕೂ ಗಣಿತದ ಲೆಕ್ಕಾಚಾರ ಬೇಕೇ ಬೇಕು. ಗಣಿತವಿಲ್ಲದೆ ಬದುಕಿಲ್ಲ. ಗಣಿತವನ್ನು ಕಲಿತವರಿಗೆ ಉಳಿದ ವಿಷಯಗಳೆಲ್ಲಾ ನೀರು ಕುಡಿದಷ್ಟು ಸುಲಭ.ಆದ್ದರಿಂದ ವಿದ್ಯಾರ್ಥಿಗಳು ರಾಮಾನುಜನ್ ರಂತಹ ಗಣಿತಜ್ಞ ಮಹನೀಯರ ಬದುಕನ್ನು ಮಾದರಿಯಾಗಿಟ್ಟು ಕೊಂಡು ಗಣಿತದ ಬಗ್ಗೆ ವಿಶೇಷ ಆಸಕ್ತಿಮತ್ತು ಒಲವನ್ನು ಹೊಂದಿ ಕಲಿಯಬೇಕೆಂದರು.

ಗಣಿತ ಬಹಳ ಕಷ್ಟ ಅದು ಕಬ್ಬಿಣದ ಕಡಲೆ ಎಂಬ ಭಾವನೆ ಬಹಳಷ್ಟು ಮಂದಿಯಲ್ಲಿದೆ. ಆದರೆ ಕನಸು ಮನಸ್ಸಿನಲ್ಲೆಲ್ಲಾ ಅಂಕಿ ಸಂಖ್ಯೆಗಳನ್ನೇ ತುಂಬಿಕೊಂಡು ಗಣಿತವನ್ನೇ ಉಸಿರಾಗಿಸಿಕೊಂಡು ಗಣಿತ ಲೋಕದಲ್ಲಿ ಜಗತ್ತು ಕಂಡರಿಯದಂತಹ ಮಹದದ್ಭುತ ಸಾಧನೆ ಮಾಡಿ ಗಣಿತದಲ್ಲಿ ಅಗಣಿತವನ್ನು ಕಂಡಿದ್ದ ಗಣಿತ ದಾರ್ಶನಿಕ ಶ್ರೀನಿವಾಸ ರಾಮಾನುಜನ್ ಬಗ್ಗೆ ಅರಿತವರಾರೂ ಗಣಿತವನ್ನು ಕಬ್ಬಿಣದ ಕಡಲೆ ಎನ್ನಲಾರರು. ಬದಲಿಗೆ ಗಣಿತ ವೆಂಬುದು ಕಲ್ಲುಸಕ್ಕರೆ ಎಂದು ಖಂಡಿತವಾಗಿಯೂ ಬಾಯಿ ಚಪ್ಪರಿಸುತ್ತಾರೆ.

ಕೇವಲ ಮೂವತ್ತೆರಡು ವರ್ಷಗಳು ಮಾತ್ರ ಬದುಕಿದ್ದ ಅಲ್ಪಾಯುಷಿಯಾದರೂ ಶ್ರೀನಿವಾಸ ರಾಮಾನುಜನ್ ಅವರು, ನೂರು ಜನ್ಮಕ್ಕಾಗು ವಷ್ಟು ಗಣಿತ ಸಾಧನೆಯನ್ನು ಮಾಡಿ ಅವರು ಎಂದೆಂದಿಗೂ ಜಗತ್ತಿನ ಗಣಿತ ಲೋಕದಲ್ಲಿ ಯಾರೂ ಮುರಿಯದಂತಹ ದಾಖಲೆ ಬರೆದು ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಉದ್ದಗಲಕ್ಕೂ ಹಾರಿಸಿದ್ದಾರೆ. ಹಾಗೆಯೇ ಗಣಿತ ಜಗತ್ತಿನಲ್ಲಿ ಅಮರರಾಗಿದ್ದಾರೆ. ಬಹು ಮುಖ್ಯವಾಗಿ ‘ ಪೈ ‘ಎಂಬ ಸಂಖ್ಯೆಯ ನಿರ್ದಿಷ್ಟ ಮೌಲ್ಯವನ್ನು ನಿರ್ಧರಿಸಲು ರಾಮಾನುಜನ್ ಬರೆದಿದ್ದ ವಿಶೇಷ ಸೂತ್ರ ವಿಶ್ವದ ಮಹತ್ವದ ಮೈಲುಗಲ್ಲುಗಳ ಲ್ಲೊಂದಾಗಿದೆ. ಮೂವತ್ತೆರಡನೆಯ ಚಿಕ್ಕ ವಯಸ್ಸಿನಲ್ಲಿಯೇ ಅವರು ಸುಮಾರು ೩೯೦೦ ಗಣಿತ ಸೂತ್ರಗಳನ್ನು ರಚಿಸಿದ್ದರಲ್ಲದೆ ಸಾವಿರಾರು ಗಣಿತ ಪ್ರಮೇಯಗಳನ್ನು ಜಗತ್ತಿಗೆ ನೀಡಿದ್ದರು.ಅವರು ಬರೆದು ಪ್ರಕಟಿಸಿದ್ದ ನೂರಾರು ಸಂಶೋಧನಾ ಲೇಖನಗಳು ಮಾತ್ರವಲ್ಲದೆ ನೋಟ್ ಪುಸ್ತಕಗಳಲ್ಲಿ ಅವರು ಬರೆದು ಹೋಗಿದ್ದ ಲೆಕ್ಕವಿಲ್ಲದಷ್ಟು ಗಣಿತ ಸೂತ್ರಗಳು ಹಾಗೂ ಪ್ರಮೇಯಗಳನ್ನು ಕುರಿತು ಇಂದಿಗೂ ಅಧ್ಯಯನಗಳು, ಸಂಶೋಧನೆಗಳು ನಡೆಯುತ್ತಿವೆ ಎಂದು ಹೇಳಿದರು.


ರಾಷ್ಟ್ರೀಯ ಗಣಿತ ದಿನದ ದ್ಯೋತಕವಾಗಿ ನಡೆದ ಗಣಿತ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಾದ ೧೦ನೇ ತರಗತಿಯ ಎಂ.ಎಲ್. ಧೀರಜ್ ಮತ್ತು ಆರ್.ಪ್ರೀತಮ್, ೯ನೇ ತರಗತಿಯ ಕೀರ್ತಿಕ್ ಜೈ ಮತ್ತು ಎಲ್. ಭಾರ್ಗವ ಹಾಗು ಕಿಷನ್ ಲಾಲ್ ಅವರುಗಳಿಗೆ ಕಲಾವಿದೆ ಹಾಗು ಲೇಖಕಿ ಡಾ.ಜಮುನಾ ರಾಣಿ ಮಿರ್ಲೆ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮಅವರು ಬಹುಮಾನ ವಿತರಣೆ ಮಾಡಿ ಗೌರವಿಸಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ. ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಲೇಖಕ ಎಸ್.ಜೆ.ಸೀತಾರಾಂ ಅವರು ರಾಷ್ಟ್ರೀಯ ಗಣಿತ ದಿನದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಬದುಕು-ಬರಹ,ಸಾಧನೆ-ಸಿದ್ಧಿ ಕುರಿತು ಸವಿವರವಾಗಿ ಮಾತ ನಾಡಿದರು.ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಗೌರವಾರ್ಥ ವಿಶ್ರಾಂತ ಗಣಿತ ಶಿಕ್ಷಕ ಹಾಗೂ ಮುಕ್ತಕ ಕವಿ ಎಂ.ಮುತ್ತುಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಡಿ.ಬನುಮಯ್ಯ ಬಾಲಕರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೃಪಾಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.

ಪ್ರಾರಂಭದಲ್ಲಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ಎ. ಸಂಗಪ್ಪ ಅವರು ಪ್ರಾಸ್ತಾವಿಕ ಭಾಷಣಮಾಡಿ ಕಾರ್ಯಕ್ರಮದ ಆಶಯ ತಿಳಿಸಿದರು.ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಶಿಕ್ಷಕರಾದ ನಿಂಗರಾಜು, ಕೆ.ಎಂ. ಗೋವಿಂದ ರಾಜು, ಸಿ. ತಾರಾ, ಜಿ. ಗೀತಾ, ಎನ್. ಉಮಾ, ಸರ್.ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳ ಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಚಂದ್ರೇಗೌಡ ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular