ನವದೆಹಲಿ: ತೀವ್ರ ಆತಂಕ ಮೂಡಿಸಿರುವ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿದೆ ಎಂದು ಮೂಲಗಳಿಂದು ತಿಳಿದುಬಂದಿದೆ.
ಕೆಫೆ ಸ್ಫೋಟದಲ್ಲಿ ಆರೋಪಿಯ ಮುಖ ಚಹರೆ ಪತ್ತೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದ್ದು, ತಲೆಮರೆಸಿಕೊಂಡಿರುವ ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿತ್ತು. ಆದರೆ, ಪ್ರಕರಣ ಸೂಕ್ಷ್ಮತೆ ಪಡೆದ ಹಿನ್ನೆಲೆಯಲ್ಲಿ ತ್ವರಿತ ತನಿಖೆಗಾಗಿ ಗೃಹ ಸಚಿವಾಲಯ ಎನ್‌ಐಎಯನ್ನು ಅಖಾಡಕ್ಕಿಳಿಸಿದೆ. ಇದಕ್ಕೂ ಮೊದಲು ಎನ್‌ಐಎ ತಂಡ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಭಯೋತ್ಪಾದನೆ ದೃಷ್ಟಿಕೋನದಿಂದಲೂ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ರಾಜ್ಯ ಸಿಸಿಬಿ ಪೊಲೀಸರು ನಡೆಸಿದ ಈವರೆಗಿನ ತನಿಖೆಯ ಮಾಹಿತಿಯನ್ನು ಪಡೆದಿರುವ ಎನ್‌ಐಎ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಬಂದ ನಂತರ ಪ್ರಕರಣದ ಕಡತಗಳ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಸೋಮವಾರ ಅಥವಾ ಮಂಗಳವಾರ ಕೇಂದ್ರ ಗೃಹ ಸಚಿವಾಲಯದಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.