ಬೆಂಗಳೂರು: ಆರ್‌ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮದಲ್ಲಿ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ, ಅಪಾಯಕಾರಿ ನಿರ್ವಹಣೆಗೆ ಕಾರಣವಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸಚಿವ ಸಂಪುಟ ತೀರ್ಮಾನಿಸಿದೆ. ಸಚಿವ ಎಚ್.ಕೆ. ಪಾಟೀಲ್ ಅವರು ನೀಡಿದ ಮಾಹಿತಿಯಂತೆ, ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ಏಕಸದಸ್ಯ ಆಯೋಗದ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ.
ಐಪಿಎಸ್ ಅಧಿಕಾರಿಗಳಾದ ಬಿ. ದಯಾನಂದ್, ವಿಕಾಸ್ ಕುಮಾರ್, ಶೇಖರ್ ಟೆಕ್ಕನವರ್ ಮತ್ತು ಇತರರು ವಿಫಲರಾದ ಬಗ್ಗೆ ವರದಿಯಿದೆ. ಇವರ ವಿರುದ್ಧ ಇಲಾಖೆಮಟ್ಟದ ವಿಚಾರಣೆ ನಡೆಯಲಿದೆ. ಖಾಸಗಿ ಸಂಸ್ಥೆಗಳಾದ ಕೆಎಸ್ಸಿಎ, ಡಿಎನ್ಎ ಮತ್ತು ಆರ್ಸಿಬಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸರಕಾರಿ ಅಧಿಕಾರಿಗಳಲ್ಲಿ ತಪ್ಪುಪಡಿಸಿದವರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.