ಬೆಂಗಳೂರು: ಮನ್ರೇಗಾ ವಿಚಾರವಾಗಿ ಬಹಿರಂಗ ಚರ್ಚೆ ಮಾಡುವ ವಿರೋಧ ಪಕ್ಷಗಳ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಅವರು ಯಾವಾಗ ಬೇಕಾದರೂ, ಯಾವುದೇ ವೇದಿಕೆಯಲ್ಲಾದರೂ ಚರ್ಚೆಗೆ ಬರಲಿ, ನಾನು ಸಿದ್ಧ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ.
ಈ ಬಗ್ಗೆ ಅರಮನೆ ಮೈದಾನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮನ್ರೇಗಾ ವಿಚಾರವಾಗಿ ಬಹಿರಂಗ ಚರ್ಚೆಯ ವಿಪಕ್ಷಗಳ ಪಂಥಾಹ್ವಾನವನ್ನು ನಾನು ಸ್ವೀಕರಿಸುತ್ತೇನೆ. ಸಾರ್ವಜನಿಕ ವೇದಿಕೆ, ಅಧಿವೇಶನ ಅಥವಾ ಮಾಧ್ಯಮ ವೇದಿಕೆಯಾದರೂ ಸರಿ. ಚರ್ಚೆಗೆ ನಾನು ಸಿದ್ಧ. ಮೊದಲು ‘ಡೈಲಾಗ್ ವೀರ ಕುಮಾರಸ್ವಾಮಿ’ ಅವರು ಬಂದರೆ ಒಳ್ಳೆಯದು ಎಂದಿದ್ದಾರೆ.
ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚರ್ಚೆಗೆ ಸಿದ್ಧ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅವರನ್ನೂ ಸ್ವಾಗತಿಸುತ್ತೇನೆ. ಮೊದಲು ಅವರೇ ಬಂದರೆ ಬಹಳ ಒಳ್ಳೆಯದು. ಬಹಿರಂಗ ಚರ್ಚೆಗೆ ಯಾವಾಗ ಸಮಯ ನಿಗದಿ ಮಾಡುತ್ತೀರಾ ಹೇಳಿ. ಇಂದು ಸಂಜೆಯಿಂದಲೇ ಚರ್ಚೆಗೆ ಸಿದ್ಧ ಎಂದು ತಿಳಿಸಿದ್ದಾರೆ.
ಅಲ್ಲದೆ ನರೇಗಾ ವಿಚಾರದಲ್ಲಿ ನನಗೆ ಚರ್ಚೆ ಮಾಡಲು ಯಾವ ತಯಾರಿಯೂ ಬೇಕಾಗಿಲ್ಲ. ಎಲ್ಲಾ ಮಾಹಿತಿಗಳು ನನ್ನ ಬೆರಳ ತುದಿಯಲ್ಲಿವೆ. ನರೇಗಾ ಯೋಜನೆಯಲ್ಲಿ ನಮ್ಮ ಕನಕಪುರ ತಾಲೂಕಿನಲ್ಲಿ ಎಷ್ಟು ಕೆಲಸ ಆಗಿದೆ ಎಂಬುದು ನಮಗೆ ಗೊತ್ತಿದೆ. ನರೇಗಾ ಯೋಜನೆ ಜಾರಿಯಲ್ಲಿ ಕನಕಪುರ ನಂ.1 ಎಂದು ಬಿಜೆಪಿಯ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿದೆ. ಈ ವಿಚಾರ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಜಯೇಂದ್ರ ಅವರಿಗೆ ಗೊತ್ತಿದೆಯೋ, ಇಲ್ಲವೋ?. ನಮ್ಮ ತಾಲೂಕಿನಲ್ಲಿ ಅವ್ಯವಹಾರ ಆಗಿದೆಯೇ, ಇಲ್ಲವೇ ಎಂದು ಕೇಂದ್ರ ಸರ್ಕಾರ ಹತ್ತು ತಂಡ ಕಳುಹಿಸಿ ತನಿಖೆ ಮಾಡಿಸಿದೆ ಎಂದು ತಿಳಿಸಿದ್ದಾರೆ.
ಇದೆ ವೇಳೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ‘ಲೀಸ್ಡ್ ಸಿಎಂ’ ಎಂದು ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿ, ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ. ಮೊದಲಿನಿಂದ ಮಾಧ್ಯಮಗಳ ಮುಂದೆ ಡೈಲಾಗ್ ಹೊಡೆದು ಹೋಗುವುದನ್ನು ನೋಡಿದ್ದೇವೆ. ಅವರ ಟೀಕೆಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡುತ್ತಾರೆ. ಆ ಸಾಮರ್ಥ್ಯ ಅವರಿಗಿದೆ ಎಂದು ಹೇಳಿದರು.
ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ಎಂಟ್ರಿ ನೀಡುತ್ತಾರೆ ಎಂದು ಕೇಳಿದಾಗ, “ರಾಜ್ಯ ರಾಜಕಾರಣ ಮಾತ್ರ ಯಾಕೆ ಹಳ್ಳಿಯಿಂದಲೇ ರಾಜಕಾರಣ ಮಾಡಲಿ” ಎಂದರು.
ಇನ್ನೂ ಒಕ್ಕಲಿಗ ಉದ್ಯಮಿ ಕಾರ್ಯಕ್ರಮದ ಬಗ್ಗೆ ಕೇಳಿದಾಗ, ಯುವ ಒಕ್ಕಲಿಗ ಉದ್ಯಮಿಗಳನ್ನು ಸೇರಿಸಿ ಉತ್ತೇಜನ ನೀಡಲಾಗುತ್ತಿದೆ. ಇಲ್ಲಿ ಉದ್ಯಮಿಗಳು ಪರಸ್ಪರ ಸೇರಿದ್ದಾರೆ. ನಾನು ಇಲ್ಲಿರುವ ಉದ್ಯಮಿಗಳ ಬಗ್ಗೆ ಮಾಹಿತಿ ಪಡೆದೆ. ಅವರು ಬಹಳ ಶ್ರಮ ಪಡುತ್ತಿದ್ದಾರೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ಅವರಿಗೆ ಶುಭ ಹಾರೈಸುತ್ತಿದ್ದೇನೆ ಎಂದರು.



