Tuesday, May 20, 2025
Google search engine

Homeರಾಜ್ಯ“AI” ಯಂತಹ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೇಮಕಾತಿ ಪ್ರಕ್ರಿಯೆ ಹೆಚ್ಚು ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತವಾಗಿ...

“AI” ಯಂತಹ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೇಮಕಾತಿ ಪ್ರಕ್ರಿಯೆ ಹೆಚ್ಚು ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತವಾಗಿ ಮಾಡಲಾಗುವುದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತವಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.

ಹೋಟೆಲ್ ತಾಜ್ ವೆಸ್ಟ್ ಎಂಡ್ ನಲ್ಲಿ ಇಂದು ಆಯೋಜಿಸಿದ್ದ ರಾಜ್ಯ ಲೋಕ ಸೇವಾ ಆಯೋಗಗಳ ಅಧ್ಯಕ್ಷರ 25 ನೇ ರಾಷ್ಟ್ರೀಯ ಸಮ್ಮೇಳನ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಲೋಕ ಸೇವಾ ಆಯೋಗಗಳು ಅರ್ಹತೆ ಮತ್ತು ನ್ಯಾಯಪರತೆಯನ್ನು ಎತ್ತಿಹಿಡಿದು, ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡುವ ಪ್ರಜಾಪ್ರಭುತ್ವದ ಸ್ತಂಭಗಳಾಗಿವೆ. ಸಾರ್ವಜನಿಕ ಸೇವೆಯಲ್ಲಿ ಕರ್ನಾಟಕಕ್ಕೆ ಶ್ರೀಮಂತ ಐತಿಹ್ಯವಿದೆ. ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆಗಳನ್ನು ದಿವಾನ್ ಶ್ರೀ ಕೆ.ಶೇಷಾದ್ರಿ ಅಯ್ಯರ್ ಅವರು 1892 ರಲ್ಲಿಯೇ ಪ್ರಾರಂಭಿಸಿದರು. ಈ ಪ್ರಾರಂಭಿಕ ಹೆಜ್ಜೆಯು ವಿಶಿಷ್ಟ ಆಡಳಿತಗಾರರ ಪಡೆಯನ್ನು ನೇಮಕಾತಿ ಮಾಡಿಕೊಳ್ಳಲು ಭದ್ರಬುನಾದಿಯನ್ನು ಹಾಕಿದ್ದು, ಕರ್ನಾಟಕ ಈ ಪರಂಪರೆಯನ್ನು ಹೆಮ್ಮೆಯಿಂದ ಮುಂದುವರೆಸಿಕೊಂಡು ಬಂದಿದೆ ಎಂದು ಸ್ಮರಿಸಿದರು.

ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸರ್ಕಾರ ಕೆಲವು ಪ್ರಮುಖ ಸುಧಾರಣೆಗಳನ್ನು ಜಾರಿಮಾಡಿದೆ. ಅವುಗಳಲ್ಲಿ ಗ್ರೂಪ್ ಸಿ ಹುದ್ದೆಗಳಿಗೆ ಸಂದರ್ಶನವನ್ನು ರದ್ದುಗೊಳಿಸುವುದು. ಗ್ರೂಪ್ ಬಿ ಹುದ್ದೆಗಳಿಗೆ ಹಾಗೂ ಗೆಜೆಟೆಡ್ ಪ್ರೋಬೇಶನರ್ಸ್ ಪರೀಕ್ಷೆಗಳಲ್ಲಿ ಸಂದರ್ಶನದ ಅಂಕಗಳನ್ನು ಕಡಿತಗೊಳಿಸಲಾಗಿದೆ. ನ್ಯಾಯಯುತ ಹಾಗೂ ಪಾರದರ್ಶಕತೆಯನ್ನು ಪ್ರೋತ್ಸಾಹಿಸಲು ನೇಮಕಾತಿ ಮಾದರಿಗಳನ್ನು ಸರಳೀಕೃತಗೊಳಿಸಿದೆ ಎಂದರು.

ಕರ್ನಾಟಕ ಲೋಕ ಸೇವಾ ಆಯೋಗ (ನೇರ ನೇಮಕಾತಿ) ನಿಯಮಗಳು 2021 ನ್ನು ಪರಿಚಯಿಸಿದ್ದು, ಇದು ವ್ಯಕ್ತಿತ್ವ ಪರೀಕ್ಷೆಯ ಮೌಲ್ಯಕ್ಕಿಂತ, ಪ್ರಮಾಣೀಕರಿಸಿದ ಪ್ರಕ್ರಿಯೆಗಳಿಗೆ ,ಒತ್ತು ನೀಡಿದೆ . ಪ್ರಶ್ನೆಪತ್ರಿಕೆ ಸೋರಿಕೆಗಳಂತಹ ಸವಾಲುಗಳನ್ನು ಎದುರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಾರದರ್ಶಕತೆಯನ್ನು ಖಾತ್ರಿಗೊಳಿಸಲು ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಪುನಃ ಗಳಿಸಲು ದೃಢವಾದ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಅತ್ಯಗತ್ಯ ಎಂದರು.

ಹೆಚ್ಚುತ್ತಿರುವ ನಿರುದ್ಯೋಗ ನ್ಯಾಯಯುತ ಹಾಗೂ ತ್ವರಿತ ನೇಮಕಾತಿ ಪ್ರಕ್ರಿಯೆಗಳನ್ನು ಬೇಡುತ್ತದೆ. ಯು. ಪಿ. ಎಸ್.ಸಿ ಯಲ್ಲಿರುವಂತೆ ಸಕಾಲಕ್ಕೆ ಫಲಿತಾಂಶ ಪ್ರಕಟಿಸುವುದು ಮಾದರಿಯಾಗಬಲ್ಲದು. ಲೋಕ ಸೇವಾ ಆಯೋಗಗಳ ವಿರುದ್ಧ ಇರುವ ಬ್ಯಾಕ್ ಲಾಗ್ ಪ್ರಕರಣಗಳನ್ನು ಬಗೆಹರಿಸುವುದು ದಕ್ಷತೆಯ ಸುಧಾರಣೆ ಹಾಗೂ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಲು ಮುಖ್ಯವಾಗಿದೆ ಎಂದರು. ಕೆಪಿಎಸ್ ಸಿ ಯನ್ನು ಸದೃಢಗೊಳಿಸಲು ಹೆಚ್ಚಿನ ಸಂಪನ್ಮೂಲಗಳು, ಸಿಬ್ಬಂದಿ ಹಾಗೂ ಮೂಲಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ.

AI ಬಳಕೆ:

ಇತರ ರಾಜ್ಯಗಳು ಅನುಸರಿಸುವ ಮಾರ್ಗಗಳು ಹಾಗೂ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತವಾಗಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸ್ವತಂತ್ರ ಪರೀಕ್ಷಾ ನಿಯಂತ್ರಕರ ಹುದ್ದೆಗಳನ್ನು ಸೃಜಿಸುವ ಮೂಲಕ ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾದ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ನಂಬಿಕೆಯಿರಿಸಿದೆ ಎಂದರು.

ಉತ್ತಮ ಆಡಳಿತಕ್ಕಾಗಿ ಸರ್ಕಾರಿ ನೌಕರರಿಗೆ ಗುಣಮಟ್ಟದ ಸೇವೆಗೆ ತರಬೇತಿ ನೀಡುವುದು ಅವಶ್ಯವಾಗಿದೆ. ಈ ದಿಸೆಯಲ್ಲಿ ಇಂದು ನಡೆಯುತ್ತಿರುವ ಸಮ್ಮೇಳನ, ಅರ್ಥಪೂರ್ಣ ಚರ್ಚೆ,ಸಹಯೋಗ ಹಾಗೂ ವಿಚಾರ ವಿನಿಯಮಗಳ ಮೂಲಕ ಶಕ್ತಿ ತುಂಬಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular