ಬೆಂಗಳೂರು: ವಿದ್ಯುತ್, ನೀರು, ಬಸ್ಸು, ಹಾಲು ಮತ್ತು ಮೆಟ್ರೋ ದರಗಳನ್ನು ಹೆಚ್ಚಿಸಿ ಈಗಾಗಲೇ ಸಾರ್ವಜನಿಕರ ಮೇಲೆ ಹಣದ ಹೊರೆ ಹಾಕಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ಇದೀಗ ಆಸ್ತಿ ಖರೀದಿದರ ಮೇಲೂ ಬಿಗ್ ಶಾಕ್ ನೀಡಿದೆ. ಆ.31ರಿಂದ ಸುವರ್ಣ ಕರ್ನಾಟಕದಲ್ಲಿ ಆಸ್ತಿ ಖರೀದಿಗೆ ನೋಂದಣಿ ಶುಲ್ಕವನ್ನು ಶೇ.1ರಿಂದ ಶೇ.2 ರಷ್ಟು ಏರಿಕೆ ಮಾಡಲಾಗಿದೆ.
ಈ ಹಿಂದೆ ನಿವೇಶನ, ಮನೆ, ಫ್ಲಾಟ್, ಭೂಮಿ ಖರೀದಿಗೆ ಶೇ.1ರಷ್ಟು ನೋಂದಣಿ ಶುಲ್ಕ, ಶೇ.5.6ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ.6.6ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು. ಹೊಸ ದರಗಳ ಪ್ರಕಾರ, ಈಗ ಶೇ.7.6ರಷ್ಟು ಶುಲ್ಕ ಕಟ್ಟಬೇಕಾಗುತ್ತದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈ ಕುರಿತ ಅಧಿಕೃತ ಆದೇಶ ಹೊರಡಿಸಿದ್ದು, ಮಾರ್ಗಸೂಚಿ ದರದ ಆಧಾರದಲ್ಲಿ ನವೀಕರಿಸಲಾಗಿದೆ.
ಇದಕ್ಕೆ ಕಾರಣವಾಗಿ ಆಯುಕ್ತ ಮುಲೈ ಮುಗಿಲನ್ ಅವರು ತಮಿಳುನಾಡು (ಶೇ.9), ಕೇರಳ (ಶೇ.10), ಆಂಧ್ರಪ್ರದೇಶ ಮತ್ತು ತೆಲಂಗಾಣ (ಶೇ.7.5) ರಾಜ್ಯಗಳಲ್ಲಿ ಹೆಚ್ಚಿನ ದರಗಳನ್ನು ಉಲ್ಲೇಖಿಸಿ, ಕರ್ನಾಟಕದಲ್ಲಿಯೇ ಕಡಿಮೆ ದರವಿದೆ ಎಂಬ ವಾದ ಮುಂದಿಟ್ಟಿದ್ದಾರೆ. ಇನ್ನು ಮುಂದೆ ನಾಗರಿಕರಿಗೆ ಉತ್ತಮ ಸೇವೆ ನೀಡಲು ಈ ಪರಿಷ್ಕರಣೆ ಅಗತ್ಯವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.