ಬೆಂಗಳೂರು: ಕಾರ್ಯಶೈಲಿ ಬದಲಾಯಿಸಿಕೊಂಡು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಂಟಿಕೊಂಡಿರುವ ಕಳಂಕವನ್ನು ತೊಡೆದು ಹಾಕಿ ಎಂದು ನಗರದ ಬಿಡಿಎ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.
ಈ ಕುರಿತು ಮಂಗಳವಾರ ಬಿಡಿಎ ಆಡಳಿತ ಸುಧಾರಣೆಗಳು, ಸಾರ್ವಜನಿಕ ಅಹವಾಲು ನಿರ್ವಹಣೆ ಕುರಿತು ಬಿಡಿಎ ನೌಕರರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನನ್ನದೇ ಆದ ರೀತಿಯ ಇಂಟಿಲಿಜೆನ್ಸ್ ಮೂಲಕ ನಿಮ್ಮಲ್ಲಿ ನಡೆಯುತ್ತಿರುವ ಸಂತೆ, ದಂಧೆ, ಏಜೆಂಟ್‌ಗಳ ಪಟ್ಟಿ ಪಡೆಯಲು ಆರು ತಿಂಗಳು ಬೇಕಾಯಿತು. ಪ್ರತಿ ಹಂತದಲ್ಲಿ ಎಷ್ಟು ಕೊಳಕಿದೆ, ಎಷ್ಟು ಒಳ್ಳೆಯದಿದೆ ಎಂಬುದನ್ನು ಅರಿತಿದ್ದೇನೆ. ಹೀಗಾಗಿ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇನ್ನೂ ಈ ವಿಚಾರವಾಗಿ ಕೆಲವರಿಗೆ ಇದರಿಂದ ಸಮಾಧಾನ ಆಗದಿರಬಹುದು. ಶೇಕಡ 10 ರಷ್ಟು ಸಿಬ್ಬಂದಿಯಿಂದ ಇಡೀ ಬಿಡಿಎಗೆ ಕೆಟ್ಟ ಹೆಸರು ಬರುತ್ತಿದೆ. ಆತ್ಮಸಾಕ್ಷಿಗೆ ಒಪ್ಪುವಂತೆಯಾದರೂ ಬಿಡಿಎ ಘನತೆಯನ್ನು ಬದಲಿಸಿಕೊಂಡು ಹೋಗಬೇಕು. ಈ ಬಗ್ಗೆ ಮಾರ್ಗದರ್ಶನ ನೀಡಲು ತರಬೇತಿ ನೀಡಲಾಗುತ್ತಿದೆ ಎಂದರು.
ಬಿಡಿಎ ಹಾಗೂ ಜಿಬಿಎ ಬೆಂಗಳೂರಿನ ಮುಖವಾಣಿ. ಪ್ರತಿ ಕಡತವನ್ನು ಕೊಕ್ಕೆ ಹಾಕಿ ಓಡಾಡಿಸುವ ಬದಲು ಸಕಾರಾತ್ಮಕ ಮನೋಭಾವದಲ್ಲಿ ಪರಿಹಾರ ಹುಡುಕಿ. ತಪ್ಪು ಮಾಡಿ ನನ್ನ ಕಣ್ಣಿಗೆ ಬೀಳಬೇಡಿ. ಬಿದ್ದರೆ ಬಡಿದು ಬಿಸಾಕುತ್ತೇನೆ. ಪ್ರಕರಣ ದಾಖಲಿಸಿದ ಬಳಿಕ, ಯಾರಿಂದ ಶಿಫಾರಸ್ಸು ತಂದರೂ ಬಗ್ಗುವುದಿಲ್ಲ. ನಾಗರಿಕರು ಬಂದಾಗ ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಬೇಕು. ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುತ್ತಾ ಹೋದರೆ, ಆಗುವುದಿಲ್ಲ. ಉದಾರ ಮನಸ್ಸಿನಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಮಗ್ರವಾಗಿ ಬೆಂಗಳೂರು ನಗರ ಕಟ್ಟುವಲ್ಲಿ ಎಲ್ಲರ ಕೊಡುಗೆಯೂ ಇರಲಿದೆ ಎಂದು ಹೇಳಿದರು.
ಇನ್ನೂ ಬಿಡಿಎ ಹಾಗೂ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜ.17ಕ್ಕೆ ಬಿಡಿಎ ರಚನೆಯಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಈ ಸಂಭ್ರಮಾಚರಣೆ ವೇಳೆ ಹೆಗ್ಗುರುತು ಬಿಟ್ಟು ಹೋಗಲು ನನ್ನ ಹಾಗೂ ಬಿಡಿಎ ಅಧ್ಯಕ್ಷ ಹ್ಯಾರಿಸ್ ಅವರ ತಂಡದ ಅಭಿಲಾಶೆಯಾಗಿದೆ. ಇದಕ್ಕೆ ಬಿಡಿಎನಲ್ಲಿ ಪಾರದರ್ಶಕತೆ ತರಬೇಕು, ನೊಂದ ಜನರು ಬಿಡಿಎ ಬಳಿಗೆ ಗೌರವಯುತವಾಗಿ ಬರುವಂತಾಗಬೇಕು ಎಂದರು.
ಅಲ್ಲದೆ ಟೌನ್ ಪ್ಲಾನಿಂಗ್ ಗೆ ಸಿವಿಲ್ ಹಾಗೂ ಆರ್ಕಿಟೆಕ್ಟರ್ ಎಂಜಿನಿಯರ್ ಹೊರತಾಗಿ ಬೇರೆ ಎಂಜಿನಿಯರ್‌ಗಳು ಬರುತ್ತಿದ್ದಾರೆ. ಹೀಗಾಗಿ ಕೆಂಪೇಗೌಡ ಪ್ರಾಧಿಕಾರದ ಜಾಗದಲ್ಲಿ ವಿಟಿಯು ಮೂಲಕ ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಆರಂಭಿಸಲು ಮುಂದಾಗಿದ್ದೇನೆ. ಮುಂದಿನ ಎಲ್ಲಾ ನಗರಗಳಲ್ಲಿ ಯೋಜನೆ ರೂಪಿಸಬೇಕು. ಪ್ಲಾನಿಂಗ್ ವಿಚಾರದಲ್ಲಿ ಮೈಸೂರು ನಗರ ಬೆಂಗಳೂರಿಗಿಂತ ಉತ್ತಮವಾಗಿದ್ದು, ಬೆಂಗಳೂರಿನಲ್ಲಿ ಜಯನಗರ, ಮಲ್ಲೇಶ್ವರ, ಚಾಮರಾಜಪೇಟೆ ಹೊರತಾಗಿ ಬೇರೆ ಪ್ರದೇಶಗಳಲ್ಲಿ ಹೇಳಿಕೊಳ್ಳುವ ಯೋಜನೆ ರೂಪಿಸಿಲ್ಲ. ಇದಕ್ಕೆ ಅಧಿಕಾರಿಗಳು ಮಾತ್ರ ಕಾರಣವಲ್ಲ. ಆಡಳಿತ ನಡೆಸುವ ರಾಜಕಾರಣಿಗಳು, ಬಿಡಿಎ ಮುನ್ನಡೆಸಿರುವ ಆಯುಕ್ತರು, ಟೌನ್ ಪ್ಲಾನರ್ ಸೇರಿದಂತೆ ಎಲ್ಲರ ತಪ್ಪು ಇದೆ ಎಂದರು.



