ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಆರೋಪಿ ನಟ ದರ್ಶನ್ ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ವಿಚಾರ ನಡೆಸಿದ ಕೋರ್ಟ್ ಆಗಸ್ಟ್ 12ಕ್ಕೆ ವಿಚಾರಣೆ ಮುಂದೂಡಿ ಆಗಸ್ಟ್ 12ರಂದು ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶ ಹೊರಡಿಸಿತು.
ಇಂದು ನಟ ದರ್ಶನ್ ಕೋರ್ಟಿಗೆ ಹಾಜರಾಗಿದ್ದರೆ, ಇನ್ನೂ ಎ1 ಆರೋಪಿ ಪವಿತ್ರಗೌಡ, ಧನರಾಜ್, ವಿನಯ್ ಮತ್ತು ಕಾರ್ತಿಕ್ ಎನ್ನುವ ಆರೋಪಿಗಳು ಹಾಜರಾಗಿದ್ದರು. ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಆಗಸ್ಟ್ 12ಕ್ಕೆ ವಿಚಾರಣೆ ಮುಂದೂಡಿತು, ಅಲ್ಲದೆ ಆಗಸ್ಟ್ 12ರಂದು ಎಲ್ಲಾ ಆರೋಪಿಗಳು ಹಾಜರಾಗುವಂತೆ ಕೋರ್ಟ್ ಸೂಚನೆ ನೀಡಿತು.
ಸದ್ಯ ನಟ ದರ್ಶನ್ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ವಿದೇಶಕ್ಕೆ ತೆರಳಲು ಅನುಮತಿ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಕೋರ್ಟ್ ಜುಲೈ 1ರಿಂದ 25ರ ವರೆಗೆ ವಿದೇಶಕ್ಕೆ ತೆರಲು ಅನುಮತಿ ನೀಡಿತ್ತು, ಆದರೆ ನಟ ದರ್ಶನ್ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಿ ದಿನಾಂಕ ಬದಲಾವಣೆ ಮಾಡಿ ಕೋರಿದ್ದರು. ಇದೀಗ ನಟ ದರ್ಶನ್ ಅವರಿಗೆ ಜುಲೈ 11 ರಿಂದ 30ರವರೆಗೆ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ ನೀಡಿದೆ.