ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಇವರುಗಳಲ್ಲಿ ದರ್ಶನ್ ಮತ್ತು ಇನ್ನು ಏಳು ಆರೋಪಿಗಳ ಜಾಮೀನು ರದ್ದುಪಡಿಸಬೇಕೆಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ಇದೀಗ ಕೋರ್ಟ್ ತೀರ್ಪನ್ನು 10 ದಿನಗಳ ಕಾಲ ಕಾಯ್ದಿರಿಸಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಐಷಾರಾಮಿ ಬದುಕು ನಡೆಸುತ್ತಿದ್ದಾರೆ ಎಂಬ ಆಕ್ಷೇಪಣೆಯ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ನಂತರ ಅವರು ಬೆನ್ನುನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು, ಕರ್ನಾಟಕ ಹೈಕೋರ್ಟ್‌ನಿಂದ ಸಂಪೂರ್ಣ ಜಾಮೀನನ್ನು ಪಡೆದರು. ಈ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರು ಈ ಅರ್ಜಿಯನ್ನು ವಿಚಾರಣೆ ನಡೆಸಿದರು. ರಾಜ್ಯ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿ, “ಇದು ಭೀಕರ ಕೊಲೆ. ಅಪಾರ್ಟ್‌ಮೆಂಟ್ ಬಳಿಯೇ ಶವ ಪತ್ತೆಯಾಗಿದೆ. ಏಳು ಆರೋಪಿಗಳಿಗೆ ಸಿಕ್ಕಿರುವ ಜಾಮೀನು ರದ್ದುಪಡಿಸಬೇಕು” ಎಂದು ಒತ್ತಾಯಿಸಿದರು.
ನ್ಯಾಯಮೂರ್ತಿಗಳು ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಕೋರಿದ್ದು, ಲೂಥ್ರಾ ಅವರು ದರ್ಶನ್ ಮತ್ತು ಪವಿತ್ರಾ ನಡುವಿನ ಸಂಬಂಧ, ಸಾಕ್ಷ್ಯಜ್ಞರಿಗೆ ಬೆದರಿಕೆ, ಜಾಮೀನಿನ ಬಳಿಕ ದರ್ಶನ್ ಕಂಡುಬಂದ ಹಿನ್ನಲೆ ಮುಂತಾದ ಎಲ್ಲ ಅಂಶಗಳನ್ನು ವಿವರಿಸಿದರು.
ಒಂದೂವರೆ ಗಂಟೆಗಳ ಕಾಲ ವಾದ-ಪ್ರತಿವಾದ ಆಲಿಸಿ ಕಡೆಯಲ್ಲಿ ಇತರೇ ಆರೋಪಿಗಳ ಪರ ವಕೀಲರ ಮಾಹಿತಿ ಕೇಳಿತು. ಎಲ್ಲ ಆರೋಪಿಗಳ ಪರ ವಕೀಲರು ಲಿಖಿತ ವಾದ ಮಂಡಿಸಬಹುದು. ಇಂದಿನಿಂದ ಒಂದು ವಾರದಲ್ಲಿ ಮೂರು ಪುಟಗಳ ಮಾಹಿತಿ ನೀಡಬೇಕು. ಬಳಿಕ ಆದೇಶ ನೀಡುವುದಾಗಿ ಕೋರ್ಟ್ ಹೇಳಿತು.
ಈ ನಡುವೆ ದರ್ಶನ್ ಈಗ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ‘ಡೆವಿಲ್’ ಚಿತ್ರದ ಹಾಡು ಹಾಗೂ ಫೈಟ್ ದೃಶ್ಯ ಚಿತ್ರೀಕರಣದ ಪ್ರಯುಕ್ತ ಅವರು ಜುಲೈ 15ರಂದು ತೆರಳಿದ್ದು, ಜುಲೈ 25ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.