Tuesday, May 20, 2025
Google search engine

Homeಅಪರಾಧಕಾನೂನು370 ನೇ ವಿಧಿ  ರದ್ದು: ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು- ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆ

370 ನೇ ವಿಧಿ  ರದ್ದು: ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು- ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆ

ನವದೆಹಲಿ: 2019 ರಲ್ಲಿ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಮಾಡುವ ಮೂಲಕ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತ್ತು. ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು.

ಹಲವು ಸುತ್ತಿನ ವಾದ-ವಿವಾದಗಳ ನಂತರ ಇಂದು ಸೋಮವಾರ ಸುಪ್ರೀಂ ಕೋರ್ಟ್ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಲಿದೆ.  ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಈ ಹಿನ್ನೆಲೆಯಲ್ಲಿ ಇಂದು ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ತೀವ್ರ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಈಗಾಗಲೇ ಪೊಲೀಸರು ಕೆಲವು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಇತರರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ಎರಡು ವಾರಗಳ ಕಾಲ ಪೊಲೀಸರು ಕಾಶ್ಮೀರ ಕಣಿವೆಯ 10 ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಜನರನ್ನು ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಯಾರೂ ರಾಜಕೀಯಗೊಳಿಸಬಾರದು ಮತ್ತು ಎಲ್ಲರೂ ಗೌರವಿಸಬೇಕು ಎಂದು ಬಿಜೆಪಿ ಸಲಹೆ ನೀಡಿದೆ. 370 ರದ್ದತಿಯ ಪರವಾಗಿ ತೀರ್ಪು ಬಂದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಉಂಟು ಮಾಡುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ ಸಿ) ನಾಯಕ ಓಮರ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.

ಅಂತಹ ಪರಿಸ್ಥಿತಿ ಎದುರಾದರೆ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸುತ್ತದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಭರವಸೆ ವ್ಯಕ್ತಪಡಿಸಿದ್ದಾರೆ.

ಎನ್‌ ಸಿ ಮತ್ತು ಪಿಡಿಪಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್‌ ನಲ್ಲಿ (ಪಿಎಜಿಡಿ) ಪಾಲುದಾರ ಪಕ್ಷಗಳಾಗಿವೆ. ಆರ್ಟಿಕಲ್ 370 ರದ್ದತಿ ವಿರುದ್ಧ ಹೋರಾಡಲು ಜಮ್ಮು ಮತ್ತು ಕಾಶ್ಮೀರದ ಪಕ್ಷಗಳು ಗುಪ್ಕರ್ ಒಕ್ಕೂಟವನ್ನು ರಚಿಸಿಕೊಂಡಿದ್ದವು. ಜನರ ಆಶೋತ್ತರಗಳಿಗೆ ಅನುಗುಣವಾಗಿ ತೀರ್ಪು ಬರಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಪ್ರತಿಕ್ರಿಯಿಸಿದ್ದಾರೆ.

ಆಗಸ್ಟ್ 5, 2019 ರಂದು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ಕೇಂದ್ರವು ರದ್ದುಗೊಳಿಸಿತು. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ತೀರ್ಪಿನ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಹಲವು ಪಕ್ಷಗಳು ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದವು.

ಸುಪ್ರೀಂ ಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಸೇರಿದಂತೆ ಐವರು ಸದಸ್ಯರ ಸಾಂವಿಧಾನಿಕ ಪೀಠವು ಈ ವರ್ಷದ ಆಗಸ್ಟ್ 2 ರಿಂದ ಅರ್ಜಿಗಳ ಮೇಲೆ ಸುದೀರ್ಘ ತನಿಖೆ ನಡೆಸಿತು. ಸೆಪ್ಟೆಂಬರ್ 5ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಇಂದು ಈ ಪ್ರಕರಣದ ತೀರ್ಪನ್ನು ನೀಡುವುದಾಗಿ ಸುಪ್ರೀಂ ಕೋರ್ಟ್ ತನ್ನ ವೆಬ್‌ ಸೈಟ್‌ ನಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular