Monday, January 26, 2026
Google search engine

Homeರಾಜ್ಯಮಂಗಳೂರಲ್ಲಿ ಗಣರಾಜ್ಯೋತ್ಸವ ಆಚರಣೆ

ಮಂಗಳೂರಲ್ಲಿ ಗಣರಾಜ್ಯೋತ್ಸವ ಆಚರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಮಂಗಳೂರು
ನಗರದ ನೆಹರೂ ಮೈದಾನದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಿಸಲಾಯಿತು.
ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಸಚಿವ ದಿನೇಶ್ ಗುಂಡೂರಾವ್,
ಸರ್ಕಾರದ ಪ್ರಯತ್ನದಿಂದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಯಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬಲವಾದ ನೆಲೆ ಸಿದ್ಧಗೊಂಡಿದೆ. ಇದರ ಫಲವಾಗಿ ಇಲ್ಲಿನ ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳು ಅಥವಾ ದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ಹಾಗೂ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಜಿಸಲು ಸಾಧ್ಯವಾಗಲಿದೆ ಎಂದರು.
ದಿಲ್ಲಿ ಮೂಲದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಅನನ್ಯ ಶ್ರೀವಾಸ್ತವ ಪರೇಡ್ ದಂಡನಾಯಕಿಯಾಗಿ ಕಾರ್ಯನಿರ್ವಹಿಸಿ, ಕನ್ನಡದಲ್ಲಿ ಪರೇಡ್ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಈ ಬಾರಿ ಕಂಪ್ಯೂಟರ್‌ಗಳ ಬದಲಾಗಿ ತಲಾ 50,000 ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಅದೇ ರೀತಿ, 15 ವರ್ಷಗಳ ಕಾಲ ಕೆಎಸ್‌ಆರ್‌ಟಿಸಿ ಯಲ್ಲಿ ಅಪಘಾತರಹಿತವಾಗಿ ಸೇವೆ ಸಲ್ಲಿಸಿದ ಚಾಲಕರನ್ನು ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್, ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಎಸ್ಪಿ ಅರುಣ್ ಕುಮಾರ್, ಅಪರ ಜಿಲ್ಲಾಧಿಕಾರಿ ರಾಜು, ವಿವಿಧ ನಿಗಮಗಳು ಹಾಗೂ ಅಕಾಡೆಮಿಗಳ ಅಧ್ಯಕ್ಷರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸಾವಿನ ನಂತರ ಅಂಗಾಂಗ ದಾನ ಮಾಡಿದ ಸಿಂಧು ಶ್ರೀ ಅವರ ಕುಟುಂಬವನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಬೆಟರ್ಡ್ ರೆಸಲ್, ಯೆನೆಪೋಯ, ಕಾರ್ಮೆಲ್ ಹಾಗೂ ಸೇಂಟ್ ಆಗ್ನೆಸ್ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಭಾರತ್ ಸೇವಾದಳ ಮುಲ್ಲಕಾಡು ಶಾಲೆಯ ತಂಡ ಕವಾಯಿತಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರೆ, ಸ್ಕೌಟ್ಸ್ ಹುಡುಗರ ತಂಡ (ಸರ್ಕಾರಿ ಪ್ರೌಢ ಶಾಲೆ, ಕಿನ್ನಿಕಂಬಳ) ದ್ವಿತೀಯ ಸ್ಥಾನ ಪಡೆದಿದ್ದು, ರೋಲಿಂಗ್ ಶೀಲ್ಡ್ ನೀಡಿ ಅಭಿನಂದಿಸಲಾಯಿತು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular