Tuesday, September 30, 2025
Google search engine

Homeರಾಜ್ಯಸುದ್ದಿಜಾಲಬುಂಡೆ ಬೆಸ್ತರನ್ನು ಶಿಳ್ಳೆಕ್ಯಾತಸ್ ಎಂದು ನಮೂದಿಸುವಂತೆ ಉಪ ವಿಭಾಗಾಧಿಕಾರಿಗಳಲ್ಲಿ ಮನವಿ

ಬುಂಡೆ ಬೆಸ್ತರನ್ನು ಶಿಳ್ಳೆಕ್ಯಾತಸ್ ಎಂದು ನಮೂದಿಸುವಂತೆ ಉಪ ವಿಭಾಗಾಧಿಕಾರಿಗಳಲ್ಲಿ ಮನವಿ

ಹುಣಸೂರು: ಸರ್ಕಾರದ ಜಾತಿಗಣತಿ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದ್ದು ಬುಂಡೆ ಬೆಸ್ತರ ಜಾತಿಯನ್ನು ಶಿಳ್ಳೆಕ್ಯಾತಾಸ್ (ಪರಿಶಿಷ್ಟ ಜಾತಿ)ಎಂದು ನಮೂದಿಸಬೇಕಾಗಿ ಹಾಗೂ ಬುಂಡೆ ಬೆಸ್ತ ಕಾಲೋನಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಾಗಿ ಸತ್ಯ ಎಂ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಹಾಗೂ ಬೆಸ್ತ ಕಾಲೋನಿ ನಿವಾಸಿಗಳು ಮಾನ್ಯ ಉಪವಿಭಾಗಾಧಿಕಾರಿಗಳಾದ ವಿಜಯಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸತ್ಯ ಎಂ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ರವರು ಮಾತನಾಡಿ, ಬಿಬಿಸಿ ಕಾಲೋನಿಯಲ್ಲಿ ವಾಸವಾಗಿರುವ 400ಕ್ಕೂ ಕುಟುಂಬಗಳಿಂದ ಸುಮಾರು 2,000 ಜನಸಂಖ್ಯೆ ಇರುವ ಇವರ ಮೂಲ ವೃತ್ತಿ ಮೀನುಗಾರಿಕೆಯಾಗಿದ್ದು ಬುರುಡೆಯ ಸಹಾಯದಿಂದ ಹಳ್ಳ ಕೊಳ್ಳಗಳಲ್ಲಿ ಬಲೆಗಳನ್ನು ಹಾಕಿ ಮೀನು ಹಿಡಿಯುತ್ತಿದ್ದುದ್ದರಿಂದ ಇಲ್ಲಿನ ನಿವಾಸಿಗಳು ಇವರನ್ನು ಬುರುಡೆ ಬೆಸ್ತರು ಎಂದು ಗುರುತಿಸಿದ್ದು ಅದನ್ನೇ ಸರ್ಕಾರದ ದಾಖಲೆಗಳಲ್ಲಿ ಬುಂಡೆ ಬೆಸ್ತ ಎಂದು ನಮೂದಿಸಿರುತ್ತಾರೆ. ಇದು ಮೈಸೂರು ಜಿಲ್ಲೆಯನ್ನು ಮಾತ್ರ ಒಳಗೊಂಡಿದ್ದು ಆದರೆ ಮೂಲತಃ ಇವರು ಶಿಳ್ಳೆಕ್ಯಾತಸ್ ಜಾತಿಗೆ ಸೇರಿದವರಾಗಿದ್ದು ಪುರಾತನ ಕಾಲದಿಂದಲೂ ಈವರೆಗೂ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಬಳ್ಳಾರಿ ಹೀಗೆ ರಾಜ್ಯದ ಹಲವು ಭಾಗಗಳಲ್ಲಿ ವಾಸಿಸುತ್ತಿರುವ ಇವರುಗಳು ಇವರ ಶಿಳ್ಳೆಕ್ಯಾತಸ್ ಸಮುದಾಯದೊಂದಿಗೆ ಮದುವೆ ಮುಂಜಿಗಳು ಜಾತ್ರೆಗಳು, ಹಬ್ಬ ಹರಿದಿನಗಳು ಮದುವೆಯ ವಿಧಿ ವಿಧಾನಗಳು, ಭಾಷೆ, ವೃತ್ತಿ ಎಲ್ಲದರಲ್ಲೂ ಸಾಮ್ಯತೆ ಹೊಂದಿರುತ್ತಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿಯೂ ಸಹ ಬುಂಡೆ ಬೆಸ್ತರನ್ನು ಶಿಳ್ಳೆಕ್ಯಾತಸ್ ಎಂದು ಪರಿಗಣಿಸಿ ಜಾತಿ ಪ್ರಮಾಣ ಪತ್ರ ನೀಡಿರುತ್ತಾರೆ.

ಹುಣಸೂರು ತಾಲೂಕಿನಲ್ಲಿ ಮಾತ್ರ ಸರ್ಕಾರದ ದಾಖಲಾತಿಗಳಲ್ಲಿ ಬುಂಡೆ ಬೆಸ್ತರನ್ನು ಹಿಂದುಳಿದ ವರ್ಗಗಳು ಪ್ರವರ್ಗ -1 ಎಂದು ಪರಿಗಣಿಸಿರುವುದರಿಂದ ಬುಂಡೆ ಬೆಸ್ತರಿಗೆ ಯಾವುದೇ ಸೌಲಭ್ಯಗಳು ಸಿಗದೇ ವಂಚಿತರಾಗಿದ್ದಾರೆ. ಜಾತಿಗಣತಿಯಲ್ಲಿ ಜಾತಿಯನ್ನು ನಮೂದಿಸಲು ನ್ಯಾಯಾಲಯದಲ್ಲಿ ಆದೇಶವು ಸಹ ಇರುತ್ತದೆ.

ಈಗಾಗಲೇ ಶಿಳ್ಳೆಕ್ಯಾತಾಸ್ ಜಾತಿ ಸಮೀಕ್ಷೆಯ ಕುಲಶಾಸ್ತ್ರೀಯ ಅಧ್ಯಯನವನ್ನು ಡಾ. ಎಂ ಆರ್ ಗಂಗಾಧರ್ ಪ್ರಾಧ್ಯಾಪಕರು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿ ಇವರ ವರದಿಯನ್ನು ಸಹ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಈ ಬುಂಡೆ ಬೆಸ್ತರನ್ನು ಶಿಳ್ಳೆಕ್ಯಾಸ್ ಎಂದು ಪರಿಗಣಿಸಬೇಕೆಂದು ಸರ್ಕಾರಕ್ಕೆ ಈಗಾಗಲೇ ಹಲವಾರು ಬಾರಿ ಮನವಿ ಪತ್ರವನ್ನು ಸಹ ಸಲ್ಲಿಸಲಾಗಿದೆ.

  • ಹಾಗೂ ಹುಣಸೂರು ತಾಲೂಕಿನ ಬುಂಡೆ ಬೆಸ್ತ ಕಾಲೋನಿಯಲ್ಲಿ ಆಶ್ರಮ ಶಾಲೆ ಇದ್ದು ಸದರಿ ಶಾಲೆಗೆ ಎರಡು ಶಿಕ್ಷಕರನ್ನು ನೇಮಿಸಬೇಕೆಂದು,
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗ್ರಾಮಕ್ಕೆ ಸಮುದಾಯ ಭವನ ಮಂಜೂರಾಗಿದ್ದು ಸರ್ಕಾರದಿಂದ 50 ಲಕ್ಷ ಅನುದಾನ ಬಿಡುಗಡೆ ಮಾಡಿಕೊಡಬೇಕೆಂದು,
  • ಗ್ರಾಮದಲ್ಲಿ ಆಹಾರ ಪಡಿತರ ತರಲು ಪಕ್ಕದ ಉಮ್ಮತ್ತೂರು ಗ್ರಾಮಕ್ಕೆ 4 – 5 ಕಿ.ಮೀ ನಡೆದುಕೊಂಡು ಹೋಗಿ ಆಹಾರ ಪಡಿತರ ತರಬೇಕಾಗಿರುವುದರಿಂದ ಸದರಿ ಗ್ರಾಮದಲ್ಲಿಯೇ ಪ್ರತ್ಯೇಕ ನ್ಯಾಯಬೆಲೆ ಅಂಗಡಿ (ಸಬ್ ಸೆಂಟರ್) ಸ್ಥಾಪಿಸಿ ಕೊಡಬೇಕೆಂದು,
  • ಹಾಗೂ ಹಲವಾರು ವರ್ಷಗಳಿಂದ ಬುಂಡೆಬೆಸ್ತ ಕಾಲೋನಿಯ ಅವರಿಗೆ ಸ್ಮಶಾನವಿಲ್ಲದೆ ಬಹಳ ತೊಂದರೆ ಕೊಡುತ್ತಿದ್ದು, ರಸ್ತೆ ಬದಿಗಳಲ್ಲಿ, ಹೊಳೆ ಬದಿಗಳಲ್ಲಿ ಶವ ಸಂಸ್ಕಾರ ಮಾಡುವ ಪರಿಸ್ಥಿತಿ ಇರುವುದನ್ನು ಮನಗಂಡು ಸರ್ಕಾರಕ್ಕೆ ಈಗಾಗಲೇ ಪತ್ರ ಸಹ ಬರೆದಿದ್ದು ಈ ಕೂಡಲೇ ಪೆಂಜಳ್ಳಿ ಸರ್ವೆ ನಂಬರ್ 1ರಲ್ಲಿ ಸರ್ಕಾರಿ ಜಾಗ ಇರುವುದರಿಂದ 1=00 ಎಕರೆ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.
    ಈ ಹಿಂದೆ ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಪತ್ರಗಳನ್ನು ಸಲ್ಲಿಸುತ್ತಾ ಬರುತ್ತಿದ್ದರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಬಾರಿ ಜಾತಿ ಗಣತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಬುಂಡೆಬೆಸ್ತ ಜಾತಿಯನ್ನು ಶಿಳ್ಳೆಕ್ಯಾತಸ್ ಎಂದು ನಮೂದಿಸದಿದ್ದರೆ ಜಾತಿಗಣತಿಗೆ ನಾವು ಸಂಪೂರ್ಣ ಸಹಕಾರವನ್ನು ನೀಡುವುದಿಲ್ಲವೆಂದು ಹಾಗೂ ಚುನಾವಣಾ ಬಹಿಷ್ಕಾರ ಹಾಕುತ್ತೇವೆಂದು ಗ್ರಾಮಸ್ಥರು ಎಚ್ಚರಿಕೆಯನ್ನು ಸಹ ನೀಡಿರುತ್ತಾರೆ.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸಿಲ್ದಾರ್ ಅವರಿಗೆ ನಿರ್ದೇಶನ ನೀಡುವುದಾಗಿ ಹೇಳಿದರು. ಈ ಮನವಿ ಪತ್ರ ಸಲ್ಲಿಕೆ ಸಂದರ್ಭದಲ್ಲಿ ಬುಂಡೆ ಬೆಸ್ತ ಕಾಲೋನಿಯ ಅಣ್ಣಯ್ಯ, ಶಿವಣ್ಣ, ರಮೇಶ, ರಾಜು, ಸಣ್ಣಸ್ವಾಮಿ, ರಾಮಕೃಷ್ಣ ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular